ಶ್ಲೋಕ – 09
ಕಾರ್ಯಮಿತ್ಯೇವ ಯತ್ ಕರ್ಮ ನಿಯತಂ ಕ್ರಿಯತೇSರ್ಜುನ ।
ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥೯॥
ಕಾರ್ಯಮ್ ಇತಿ ಏವ ಯತ್ ಕರ್ಮ ನಿಯತಮ್ ಕ್ರಿಯತೇ ಅರ್ಜುನ ।
ಸಂಗಂ ತ್ಯಕ್ತ್ವಾ ಫಲಂ ಚ ಏವ ಸಃ ತ್ಯಾಗಃ ಸಾತ್ತ್ವಿಕಃ ಮತಃ – ಅರ್ಜುನ, ಕರ್ತವ್ಯ ದೃಷ್ಟಿಯಿಂದ ವಿಹಿತ ಕರ್ಮವನ್ನು ಮಾಡುತ್ತಲೆ ಮಮತೆಯನ್ನೂ ಫಲದ ಹಂಬಲವನ್ನೂ ತೊರೆಯುವುದು ಸಾತ್ತ್ವಿಕ ತ್ಯಾಗ ಎನಿಸುತ್ತದೆ.
ನಿಯತಕರ್ಮವನ್ನು ಮಾಡದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ನಮ್ಮ ಮನಸ್ಸು ತಲುಪಬೇಕು. ಈ ರೀತಿ ಸತ್ತ್ವಗುಣ ಮನಸ್ಸಿನಲ್ಲಿ ತುಂಬಿದಾಗ(ಅರ್ಜುನರಾದಾಗ)ಯಾವ ಕರ್ಮವನ್ನೂ ಬಿಡಲು ನಮಗೆ ಮನಸ್ಸಾಗುವುದಿಲ್ಲ. ಅಲ್ಲಿ ಫಲದ ಬಯಕೆ ಇರುವುದೇ ಇಲ್ಲ. ಸದಾ ಭಗವದರ್ಪಣ ಭಾವನೆಯಲ್ಲಿ ಖುಷಿಯಿಂದ ಕರ್ಮ ಮಾಡುವುದು; ಯಾವುದೇ ಅಹಂಕಾರ ಇಲ್ಲದೆ ಇರುವುದು; ಎಲ್ಲ ಕರ್ಮದ ಮಹತ್ವ ತಿಳಿದು ನಿಯತವಾಗಿ ಕರ್ಮ ಮಾಡುವುದು- ಸಾತ್ತ್ವಿಕತ್ಯಾಗ. ಇಲ್ಲಿ ತ್ಯಾಗ ಮಾಡುವುದು ಕರ್ಮವನ್ನಲ್ಲ ಬದಲಿಗೆ ಕರ್ಮ ಫಲವನ್ನು. ಹೀಗೆ ನಮ್ಮಲ್ಲಿರುವ ಗೊಂದಲಗಳಿಗೆ ಕೃಷ್ಣ ಅತ್ಯಂತ ಸರಳವಾದ ಉತ್ತರ ಕೊಟ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ: ಫಲಾಪೇಕ್ಷೆ ಇಲ್ಲದೆ ಅಹಂಕಾರ ತೊರೆದು ನಿಯತಕರ್ಮವನ್ನು ಮಾಡುವುದು ಸಾತ್ತ್ವಿಕ ತ್ಯಾಗ; ಸೋಮಾರಿತನದಿಂದ ಕಷ್ಟವಾಗುತ್ತದೆ ಎಂದು ನಿಯತಕರ್ಮವನ್ನು ಬಿಡುವುದು ರಾಜಸ ತ್ಯಾಗ ಮತ್ತು ತಪ್ಪು ತಿಳುವಳಿಕೆಯಿಂದ, ‘ಎಲ್ಲವೂ ಮೂಢನಂಬಿಕೆ’ ಎಂದು ನಿಯತಕರ್ಮವನ್ನು ಮಾಡದೇ ಬಿಡುವುದು ತಾಮಸ ತ್ಯಾಗ.
