ಬೆಂಗಳೂರು: ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಫೆಬ್ರವರಿ 8ರಂದು ಭಾನುವಾರ ಬುದ್ಧ–ಬಸವ–ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ 10ನೇ ಯುವಜನ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮ್ಮೇಳನಕ್ಕೆ ಈಸ್ಟ್ ಪಾಯಿಂಟ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಕವಿ ಹಾಗೂ ಕೃಷಿಕರಾದ ಡಾ. ಎಂ.ಆರ್. ಉಪೇಂದ್ರ ಕುಮಾರ್ ಅವರು ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 9 ಗಂಟೆಗೆ ಕುಂಚ ಕಲಾವಿದೆ ಶಾಂತಿ ವಾಸು ಅವರು ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್.ಎನ್. ಮುಕುಂದರಾಜ್ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಶಶಿಕಾಂತ್ ರಾವ್ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಪ್ರಗತಿಪರ ಲೇಖಕಿ ಇಂದಿರಾ ಕೃಷ್ಣಪ್ಪ ಅವರು ಸಾಹಿತಿ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರ ‘ಕಾಲದ ಜೊತೆ ನಾನೂ’ ಎಂಬ ತೆಲುಗು ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಯನ್ನು ಲೋಕಾರ್ಪಣೆ ಮಾಡುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ನಾಡೋಜ ಡಾ. ವೂಡೆ ಪಿ. ಕೃಷ್ಣ ಅವರು ಪುನೀತ್ ರಾಜಕುಮಾರ್ ದತ್ತಿ ಪ್ರಶಸ್ತಿಯನ್ನು ಯುವ ಸಾಹಿತಿಗಳಾದ ಡಾ. ಆರ್. ಸಿದ್ಧಲಿಂಗಸ್ವಾಮಿ ಹಾಗೂ ಶ್ರೀಮತಿ ವಿ. ನಿಶಾ ಗೋಪಿನಾಥ್ ಅವರಿಗೆ ಪ್ರದಾನ ಮಾಡುವರು.

ಅದೇ ಸಂದರ್ಭದಲ್ಲಿ ಕುವೆಂಪು ಶ್ರೀ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಗಣ್ಯರಿಗೆ ನೀಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರೊ. ಪಿ. ಪಾರ್ಶ್ವನಾಥ್, ಮಾಧ್ಯಮ ಕ್ಷೇತ್ರದಲ್ಲಿ ಎಂ.ಎಸ್. ಮಂಜುನಾಥ್ ಹಾಗೂ ಶ್ರೀಮತಿ ಮಾಲಾ ಹಾಸನ, ಸಾಮಾಜಿಕ ಸೇವೆಗೆ ಪರಿಸರ ಮಂಜುನಾಥ್, ಮಾಧ್ಯಮ ಸೇವೆಗೆ ಎಸ್. ರಾಧಾಕೃಷ್ಣ ಮತ್ತು ಮಹಿಳಾ ಜಾಗೃತಿಗೆ ಶ್ರೀಮತಿ ರೂಪಾ ಗೌಡ ಅವರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮಧ್ಯಾಹ್ನ ನಡೆಯುವ ಕವಿಗೋಷ್ಠಿಗೆ ಹಿರಿಯ ಸಾಹಿತಿ ಡಾ. ಹುಲಿಕುಂಟೆ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, 10 ಮಂದಿ ಕವಿಗಳು ಕವಿತೆ ವಾಚಿಸುವರು. ಈ ವೇಳೆ ಡಾ. ಕೃಷ್ಣ ಹಾನ್ ಬಾಳ್ ಹಾಗೂ ಆಶಾ ಶಿವುಗೌಡ ಅವರು ಡಾ. ಹಾದಿಮನಿ ರಮೇಶ್ ಅವರ ಕೃತಿಯನ್ನು ಲೋಕಾರ್ಪಣೆ ಮಾಡುವರು.

ಹಿರಿಯ ಸಾಹಿತಿ ಮ.ವಿ. ಶಿವಪ್ರಸಾದ್ ಅವರು ಆರು ಮಂದಿ ಸಾಹಿತಿಗಳ ಅತ್ಯುತ್ತಮ ಕೃತಿಗಳಿಗೆ ‘ಬಿಎಂಶ್ರೀ ಶ್ರೀ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡುವರು.
ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಲಲಿತಾ ಹೊಸಪ್ಯಾಟಿ ಅವರು ಸಮಾರೋಪ ನುಡಿಗಳಾಡಲಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಎಸ್.ಜಿ. ಸುಶೀಲಮ್ಮ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗಾಂಧಿ–ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಹಾಗೂ ಇಂಜಿನಿಯರ್ ಹೊಸಹಳ್ಳಿ ದಾಳೇಗೌಡ ಅವರ ನಿಂಗಮ್ಮ–ದೇಶೀಗೌಡ ರಂಗಭೂಮಿ ದತ್ತಿ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.

ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ನಂಜಪ್ಪ ಕಾಳೇಗೌಡ, ಕ್ರೈಸ್ಟ್ ಶಾಲೆಯ ಪ್ರೊ. ಬಿ.ಕೆ. ವಿದ್ಯಾ, ಲೇಖಕಿ ಜಯಶ್ರೀ ರಾಜು, ಪ್ರಾಧ್ಯಾಪಕ ಡಾ. ಆರ್. ವಾದಿರಾಜ್, ಜಿಲ್ಲಾ ಕಸಾಪ ಕಾರ್ಯದರ್ಶಿ ಸಿ. ಪುಟ್ಟಸ್ವಾಮಿ, ಸವಿತಾ ರಾಮು ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಿ. ಹೇಮಾವತಿ ಸಿಸಿರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
