ಬೆಂಗಳೂರು: ಬೆಳಗಾವಿ ಸುವರ್ಣಸೌಧದಲ್ಲಿ ಸಿ.ಟಿ. ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದು ರಾತ್ರಿ ಇಡೀ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದ ಹಕ್ಕುಚ್ಯುತಿ ಅರ್ಜಿ ಮುಕ್ತಾಯಗೊಂಡಿದೆ. ಹಕ್ಕುಬಾಧ್ಯತಾ ಸಮಿತಿ ವಿಚಾರಣೆ ವೇಳೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕ್ಷಮೆ ಕೋರಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸಮಿತಿ ಸೂಚಿಸಿದೆ.
ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನ ಸುವರ್ಣಸೌಧದ ಆವರಣದಲ್ಲಿ ಸಿ.ಟಿ. ರವಿ ಹಾಗೂ ಬಿಜೆಪಿ ಶಾಸಕರ ಮೇಲೆ ದಾಳಿಗೆ ಯತ್ನಿಸಿದ ಆರೋಪ ಮತ್ತು ಬಳಿಕ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿ.ಟಿ. ರವಿ ಅವರು ಸಭಾಪತಿಗಳಿಗೆ ಹಕ್ಕುಚ್ಯುತಿ ದೂರು ಸಲ್ಲಿಸಿದ್ದರು.
ವಿಚಾರಣೆ ವೇಳೆ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ತುಷಾರ್ ಗಿರಿನಾಥ್ ಅವರು, ಅಧಿಕಾರಿಗಳಿಂದ ನಿಯಮಾನುಸಾರ ತಪ್ಪುಗಳಾಗಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಅಧಿವೇಶನದ ವೇಳೆ ಶಾಸಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವ ಭರವಸೆಯನ್ನೂ ನೀಡಿದರು.
ಅಂದು ಸಿ.ಟಿ. ರವಿ ಅವರನ್ನು ವಶಕ್ಕೆ ಪಡೆದ ಪೊಲೀಸರು, ರಾತ್ರಿ ವೇಳೆ ವಿವಿಧ ಪ್ರದೇಶಗಳಲ್ಲಿ ಸುತ್ತಾಡಿಸಿ ಬೆಳಗಿನ ಜಾವದವರೆಗೆ ಠಾಣೆಗೆ ಕರೆದೊಯ್ಯಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಶಾಸಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಹಕ್ಕುಚ್ಯುತಿ ಅರ್ಜಿಯಲ್ಲಿ ದೂರಲಾಗಿತ್ತು.
ಇನ್ನು, ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯೂ ಸಮಿತಿ ಮುಂದೆ ಅಂದು ನಡೆದ ಬೆಳವಣಿಗೆಗಳ ಕುರಿತು ವಿವರಣೆ ನೀಡಿ, ತಮ್ಮ ಕಡೆಯಿಂದ ಅಚಾತುರ್ಯವಾಗಿದ್ದರೆ ಕ್ಷಮಿಸುವಂತೆ ಮನವಿ ಮಾಡಿದ್ದರು.
ಸರ್ಕಾರದ ಅಧಿಕಾರಿಗಳ ಕ್ಷಮೆಯಾಚನೆ ಹಾಗೂ ವಿವರಣೆಯನ್ನು ಪರಿಗಣಿಸಿದ ಸಮಿತಿಯು, ಜನಪ್ರತಿನಿಧಿಗಳಿಗೆ ಸಂವಿಧಾನದತ್ತವಾಗಿ ದೊರೆಯಬೇಕಾದ ಗೌರವವನ್ನು ಕಾಪಾಡುವಂತೆ ಸೂಚಿಸಿ, ಪ್ರಕರಣವನ್ನು ಮುಕ್ತಾಯಗೊಳಿಸಿದೆ.
