ಬೆಂಗಳೂರು, ಜೂ.22: ಕೇಂದ್ರ ಸರ್ಕಾರದ ಮಾದರಿಯಂತೆ ಕರ್ನಾಟಕ ಸರ್ಕಾರವು 40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಸೌಲಭ್ಯವನ್ನು ಘೋಷಿಸಿದೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅಡಿಯಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಆಧುನಿಕ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದ ಹೆಚ್ಚಾಗುತ್ತಿರುವ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ತಡೆಗಟ್ಟುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಯೋಜನೆಯಡಿ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ, ಲಿಪಿಡ್ ಪ್ರೊಫೈಲ್, ಲಿವರ್ ಹಾಗೂ ಕಿಡ್ನಿ ಕಾರ್ಯಪರೀಕ್ಷೆ, ಇಸಿಜಿ, ಕಣ್ಣು ಮತ್ತು ಇಎನ್ಟಿ ತಪಾಸಣೆ ಸೇರಿದಂತೆ ಹಲವು ಆರೋಗ್ಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಾಗುತ್ತದೆ. ಮಹಿಳಾ ನೌಕರರಿಗೆ ಹೆಚ್ಚುವರಿಯಾಗಿ ಸ್ತನ ಹಾಗೂ ಗರ್ಭಕಂಠದ ತಪಾಸಣೆ ಸೌಲಭ್ಯವೂ ಲಭ್ಯವಿರುತ್ತದೆ.
ಈ ಸೌಲಭ್ಯವು KASS ಯೋಜನೆಗೆ ಒಳಪಟ್ಟಿರುವ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದ್ದು, ಪ್ರತಿ ವರ್ಷ ಒಮ್ಮೆ ನಗದುರಹಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಕುಟುಂಬದ ಅವಲಂಬಿತ ಸದಸ್ಯರಿಗೆ ಹಾಗೂ ಯೋಜನೆಯಿಂದ ಹೊರಗುಳಿದ ನೌಕರರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ.
ನೌಕರರು ಸರ್ಕಾರಿ ಆಸ್ಪತ್ರೆಗಳು, ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು ಹಾಗೂ KASS ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ.
