ಶ್ಲೋಕ – 02
ಇದಂ ಜ್ಞಾನಮಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ ।
ಸರ್ಗೇSಪಿ ನೋಪಜಾಯಂತೇ ಪ್ರಳಯೇ ನ ವ್ಯಥಂತಿ ಚ ॥೨॥
ಇದಮ್ ಜ್ಞಾನಮ್ ಅಪಾಶ್ರಿತ್ಯ ಮಮ ಸಾಧರ್ಮ್ಯಮ್ ಆಗತಾಃ ।
ಸರ್ಗೇ ಅಪಿ ನ ಉಪಜಾಯಂತೇ ಪ್ರಳಯೇ ನ ವ್ಯಥಂತಿ ಚ –ಈ ತಿಳಿವು ಗಳಿಸಿ ದುಗುಡ ದೂರರಾಗಿ ನನ್ನನ್ನು ಹೋಲುವವರು ಸೃಷ್ಟಿಕಾಲದಲ್ಲಿ ಹುಟ್ಟುವುದಿಲ್ಲ; ಪ್ರಳಯಕಾಲದಲ್ಲಿ ನೋಯುವುದಿಲ್ಲ.
ಈ ಶ್ಲೋಕದಲ್ಲಿ ಬಂದಿರುವ ‘ಅಪಾಶ್ರಿತ್ಯ’ ಎನ್ನುವ ಪದ ವಿಶೇಷ ಅರ್ಥವನ್ನು ಕೊಡುವ ಪದ. ‘ಅನ್ಯತ್ ಸರ್ವಂ ಅಪಾಹಾಯಾSಶ್ರಯಣಂ-ಅಪಾSಶ್ರಯಣಃ’ “ಇನ್ಯಾರೂ ಇಲ್ಲ-ನೀನೇ ನನಗೆ ಆಶ್ರಯ” ಎಂದು ಭಗವಂತನಲ್ಲಿ ಆಶ್ರಯ ಹೊಂದುವುದನ್ನು ಇಲ್ಲಿ ‘ಅಪಾಶ್ರಿತ್ಯ’ ಎಂದಿದ್ದಾರೆ. ದ್ವಾದಶ ಸ್ತೋತ್ರದಲ್ಲಿ ಹೇಳುವಂತೆ:
ಕುರು ಭುಂಕ್ಷ್ವ ಚ ಕರ್ಮ ನಿಜಂ ನಿಯತಂ ಹರಿಪಾದವಿನಮ್ರಧಿಯಾ ಸತತಂ |
ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ಪಿತೃಮಾತೃಗತಿಃ || ೧||
ಇದು ‘ಅಪಾಶ್ರಿತ್ಯ’ ಪದದ ಮೂಲ ಅರ್ಥವನ್ನು ಹೇಳುತ್ತದೆ. ಇಲ್ಲಿ ಕೃಷ್ಣ ಹೇಳುತ್ತಾನೆ: “ಲಕ್ಷ್ಮೀ-ನಾರಾಯಣರು ಜಗತ್ತಿನ ತಂದೆ ತಾಯಿ-ಅನ್ನುವ ಜ್ಞಾನದಿಂದ ನನ್ನನ್ನು ಉಪಾಸನೆ ಮಾಡುವವರು, ನನ್ನಂತೆ ದಿವ್ಯ ಸ್ವಭಾವವನ್ನು ಪಡೆಯುತ್ತಾನೆ” ಎಂದು. ಇಂಥವರು ಸರ್ವದೋಷವನ್ನು ಕಳೆದುಕೊಂಡು, ತ್ರಿಗುಣಾತೀತ ಸ್ಥಿತಿಯಲ್ಲಿ ಭಗವಂತನನ್ನು ಸೇರಿ ಭಗವಂತನಲ್ಲಿ ನೆಲೆಸುತ್ತಾರೆ.
ಈ ಜಗತ್ತು ಸೃಷ್ಟಿಯಾಗುವುದೂ ಲಕ್ಷ್ಮೀ-ನಾರಾಯಣರಿಂದ ಮತ್ತು ಹೋಗಿ ಸೇರುವುದೂ ಅವರನ್ನೆ. ಇದನ್ನು ತಿಳಿದವನು ಹುಟ್ಟು ಸಾವನ್ನು ದಾಟಬಲ್ಲ. ಆತ ಮರಳಿ ಎಂದೂ ಈ ಸಂಸಾರ ಬಂಧದಲ್ಲಿ ಸೀಲುಕುವುದಿಲ್ಲ. ಇಲ್ಲಿ ‘ಉಪಜಾಯತೆ’ ಎನ್ನುವ ಪದ ಬಳಕೆಯಾಗಿದೆ.
ಸಂಸ್ಕೃತದಲ್ಲಿ ‘ಉಪ’ ಅಂದರೆ ‘ಉತ್ಕೃಷ್ಟ’.[ಇದು ಆಂಗ್ಲ ಭಾಷೆಯಲ್ಲಿ ‘up/upper’ ಆದರೆ, ಹಿಂದಿಯಲ್ಲಿ ‘ऊपर’ ಆಗಿದೆ. ಜರ್ಮನ್ ಭಾಷೆಯಲ್ಲಿ ಇದು ‘über’. ಕನ್ನಡದಲ್ಲಿ ಉಪ್ಪರಿಗೆ ಅನ್ನುವಲ್ಲಿ ‘ಉಪ’ – ‘’ಮೇಲೆ’ ಎನ್ನುವ ಅರ್ಥವನ್ನು ಕೊಡುತ್ತದೆ]. ಆದ್ದರಿಂದ ‘ಉಪಜಾಯತೆ’ ಎಂದರೆ ಉತ್ಕೃಷ್ಟವಾದ ಜನನ. ಭಗವಂತನ ಅರಿವಿಗೋಸ್ಕರ ಈ ದೇಹ ಧಾರಣೆ ಮಾಡಿ ಹುಟ್ಟುವುದು ಎತ್ತರದ ಹುಟ್ಟು. ಅಧ್ಯಾತ್ಮದ ಸಾಧನೆಯಿಂದ ಎತ್ತರಕ್ಕೇರುವ ಜನನ ‘ಉಪಜನನ’.
ತನ್ನ ಜೀವಮಾನದಲ್ಲಿ ಈ ಸೃಷ್ಟಿಯ ಮೂಲದ ಜ್ಞಾನವನ್ನು ಗಳಿಸಿದವ ಮತ್ತೆ ಮರಳಿ ಹುಟ್ಟಲಾರ. ಆತ ಭಗವಂತನಲ್ಲಿ ನಿರಂತರ ವಾಸ ಮಾಡುವ ಪರಮ ಪದವನ್ನು ಪಡೆಯುತ್ತಾನೆ.
