ಶ್ಲೋಕ – 25
ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ ।
ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ॥೨೫॥
ತತ್ ಇತಿ ಅನಭಿಸಂಧಾಯ ಫಲಂ ಯಜ್ಞ ತಪಃ ಕ್ರಿಯಾಃ ।
ದಾನ ಕ್ರಿಯಾಃ ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ – ಮೋಕ್ಷ ಬಯಸುವ ಸಜ್ಜನರು ಫಲವನ್ನು ಬಯಸದೆ, ‘ತತ್’ ಎನಿಸಿದ ಭಗವಂತನಿಗಾಗಿ ಬಗೆಬಗೆಯ ಯಜ್ಞ, ದಾನ ಮತ್ತು ತಪದ ಕ್ರಿಯೆಗಳನ್ನು ಆಚರಿಸುತ್ತಾರೆ.
‘ತತ್’ ಎನ್ನುವುದು ಸಮಸ್ತ ವೇದ ವಾಚ್ಯನಾದ ಭಗವಂತನ್ನು ಹೇಳುತ್ತದೆ ಎನ್ನುವುದನ್ನು ಹಿಂದೆ ನೋಡಿದ್ದೇವೆ. ಇಲ್ಲಿ-ನಾವು ಮಾಡುವ ಕರ್ಮದಲ್ಲಿ ‘ತತ್’ ಏನನ್ನು ಹೇಳುತ್ತದೆ ಎನ್ನುವುದನ್ನು ಕೃಷ್ಣ ವಿವರಿಸಿದ್ದಾನೆ. ‘ತತ್’ ಎನ್ನುವುದು ವೇದಮಾತಾ ಗಾಯತ್ರಿಯ ಸಂಕ್ಷಿಪ್ತಪದ(Abbreviation; ಮೊದಲ ಮತ್ತು ಕೊನೆಯ ಅಕ್ಷರ) ಹೀಗಾಗಿ ಇದು ಗಾಯತ್ರಿ ವಾಚ್ಯ ಭಗವಂತನ ಮುಖ್ಯ ನಾಮಧೇಯ. ‘ತತ್’ ಎನ್ನುವುದು ಕರ್ಮದಲ್ಲಿ ಭಗವಂತನು ಕೊಡುವ ಫಲವನ್ನು ಹೇಳುತ್ತದೆ. ‘ತತ್’ ಎಂದರೆ ಯಾವುದೇ ಐಹಿಕ ಫಲದ ಆಸೆ ಇಲ್ಲದೆ, ಭವಬಂಧನದಿಂದ ಬಿಡುಗಡೆಗೊಳಿಸಿ ಮೋಕ್ಷವನ್ನು ಕೊಡುವ ಭಗವಂತನ ಪ್ರೀತಿಗಾಗಿ ಮಾಡುವ ಕರ್ಮ. ಅದು ಯಜ್ಞವಿರಬಹುದು, ತಪಸ್ಸಿರಬಹುದು ಅಥವಾ ದಾನವಿರಬಹುದು. ಜ್ಞಾನಿಗಳು ದಾನ ಮಾಡುವಾಗ ಕೂಡ ಯಾವುದೇ ಐಹಿಕ ಫಲದ ಅಪೇಕ್ಷೆ ಇಲ್ಲದೆ ದಾನ ಮಾಡುತ್ತಾರೆ. ಉದಾಹರಣೆಗೆ ಅನ್ನದಾನ: ಅನ್ನದ ಅಭಿಮಾನಿ ಲಕ್ಷ್ಮಿ; ಅನ್ನದಾನ ಎಂದರೆ ದಾನ ಸ್ವೀಕರಿಸುವವನೊಳಗಿರುವ ವೈಶ್ವಾನರ ರೂಪಿ ನಾರಾಯಣನಿಗೆ ಲಕ್ಷ್ಮಿಯ ಸಮರ್ಪಣೆ.
ಇದೇ ರೀತಿ ಕನ್ಯಾದಾನ: ಕನ್ಯಾದಾನ ಮಾಡುವಾಗ ಕನ್ಯಾಪಿತೃಗಳು ಗಂಡಿನ ಆಸ್ತಿ, ಹುದ್ದೆ, ಸಂಬಳ ನೋಡಿ ದಾನ ಮಾಡುವುದಲ್ಲ. ಬದಲಿಗೆ ಹುಡುಗಿಯ ಒಳಗಿರುವ ಲಕ್ಷ್ಮಿಯನ್ನು ಹುಡುಗನ ಒಳಗಿರುವ ನಾರಾಯಣನಿಗೆ ಅರ್ಪಿತವಾಗಲಿ ಎನ್ನುವ ಅನುಸಂಧಾನದಿಂದ ನೀಡುವುದು. ಹೀಗೆ ಮೊಕ್ಷಕಾಂಕ್ಷಿಗಳು “ಎಲ್ಲ ಮಾಡಿಸುವವನು ಆ ಭಗವಂತ-ಅವನ ಪ್ರೀತ್ಯರ್ಥ ಈ ಪೂಜೆ” ಎಂದು ಯಾವುದೇ ಲೌಕಿಕ ಫಲಾಪೇಕ್ಷೆ ಇಲ್ಲದೆ ಕ್ರಿಯೆವನ್ನು ಮಾಡುತ್ತಾರೆ. ಇದು ‘ತತ್’.
