ಶ್ಲೋಕ – 26
ಸದ್ ಭಾವೇ ಸಾಧುಭಾವೇ ಚ ಸದಿತ್ಯೇತತ್ ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ ॥೨೬॥
ಸತ್ ಭಾವೇ ಸಾಧುಭಾವೇ ಚ ಸತ್ ಇತಿ ಏತತ್ ಪ್ರಯುಜ್ಯತೇ ।
ಪ್ರಶಸ್ತೇ ಕರ್ಮಣಿ ತಥಾ ಸತ್ ಶಬ್ದಃ ಪಾರ್ಥ ಯುಜ್ಯತೇ – ಪಾರ್ಥ, ‘ಹುಟ್ಟು’ ಮತ್ತು ‘ಒಳ್ಳೆಯತನ’ ಎಂಬ ಅರ್ಥದಲ್ಲಿ ‘ಸತ್’ ಎಂಬ ಶಬ್ದ ಬಳಕೆಯಾಗುತ್ತದೆ. ‘ಒಳ್ಳೆಯ ಕೆಲಸ’ ಎಂಬ ಅರ್ಥದಲ್ಲು ‘ಸತ್’ ಶಬ್ದ ಸಲ್ಲುತ್ತದೆ.
‘ಸತ್’ ಅನ್ನುವುದಕ್ಕೆ ಒಂದು ಅರ್ಥ-ಭಾವ. ಸತ್-ಭಾವ ಎಂದರೆ ಸಜ್ಜನಿಕೆಯಿಂದ ಇರುವುದು. ಇದು ಲೋಕದಲ್ಲಿ ವ್ಯಕ್ತಿಗೆ ಬಳಸುವ ಪದಪ್ರಯೋಗ. ಇದನ್ನು ಕರ್ಮದಲ್ಲಿ ಬಳಸಿದಾಗ ಸತ್-ಕರ್ಮವಾಗುತ್ತದೆ. ಓಂಕಾರ ವಾಚ್ಯ ಭಗವಂತನಿಗೆ ಅರ್ಪಣಾ ಭಾವದಿಂದ, ಯಾವುದೇ ಫಲಾಪೇಕ್ಷೆ ಇಲ್ಲದೆ(ತತ್) ಮಾಡುವ ಕರ್ಮ ‘ಸತ್’-ಕರ್ಮ. ಯಾವ ಕರ್ಮವನ್ನು ಭಗವಂತನ ಕುರಿತಾಗಿ ಮಾಡುತ್ತೇವೋ, ಆ ಕರ್ಮ ಪ್ರಶಸ್ತವಾಗಿರಬೇಕು. ಅಂದರೆ ಸ್ವಾರ್ಥಕ್ಕಾಗಿ ಮಾಡಿದರೆ ಅದನ್ನು ಜನ ಮೆಚ್ಚುವುದಿಲ್ಲ. ಬದಲಿಗೆ ತ್ಯಾಗದಿಂದ ಮಾಡುವ ಕರ್ಮ ಪ್ರಶಸ್ತ ಕರ್ಮವೆನಿಸುತ್ತದೆ. ನಾವು ಈ ರೀತಿ ಪ್ರತಿಯೊಂದು ಶಬ್ದದ ಅರ್ಥವನ್ನು ತಿಳಿದು, ಪಾಲನೆ ಮಾಡುವ ಪಾರ್ಥರಾಗಬೇಕು ಎನ್ನುವುದು ಕೃಷ್ಣನ ಸಂದೇಶ. ‘ಸತ್’ ಪದದ ಅರ್ಥವನ್ನು ಇನ್ನೂ ವಿವರವಾಗಿ ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರಿಸುತ್ತಾನೆ.
