ಶ್ಲೋಕ – 02
ಭಗವಾನುವಾಚ ।
ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।
ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥೨॥
ಭಗವಾನ್ ಉವಾಚ- ಭಗವಂತ ಹೇಳಿದನು :ಕಾಮ್ಯಾನಾಮ್ ಕರ್ಮಣಾಮ್ ನ್ಯಾಸಮ್ ಸಂನ್ಯಾಸಂ ಕವಯಃ ವಿದುಃ ।
ಸರ್ವಕರ್ಮಫಲ ತ್ಯಾಗಮ್ ಪ್ರಾಹುಃ ತ್ಯಾಗಂ ವಿಚಕ್ಷಣಾಃ –ಕಾಮ್ಯ ಕರ್ಮಗಳನ್ನು ತೊರೆಯುವುದನ್ನು ಬಲ್ಲವರು ‘ಸಂನ್ಯಾಸ’ ಎನ್ನುತ್ತಾರೆ. ಎಲ್ಲ ಕರ್ಮಗಳ ಫಲವನ್ನಷ್ಟೆ ತೊರೆಯುವುದನ್ನು ತಿಳಿದವರು ‘ತ್ಯಾಗ’ ಎನ್ನುತ್ತಾರೆ.
ಇಲ್ಲಿ ಹೇಳುವ ಸಂನ್ಯಾಸ ಗೃಹಸ್ಥರನ್ನೂ ಒಳಗೊಂಡು ಎಲ್ಲ ಸಾಧಕರಿಗೂ ಅನ್ವಯವಾಗುವ ಸಂನ್ಯಾಸ. ಸಂನ್ಯಾಸದಲ್ಲಿ ಎರಡು ವಿಧ. ಒಂದು ಕರ್ಮದ ಫಲವನ್ನು ಬಿಡುವುದು, ಇನ್ನೊಂದು ಬಯಕೆಗಳಿಂದ ಪ್ರೇರಿತವಾದ ಕರ್ಮವನ್ನೇ ತ್ಯಾಗ ಮಾಡುವುದು. ಇಲ್ಲಿ ತ್ಯಾಗ ಎಂದರೆ ಕರ್ಮವನ್ನು ತ್ಯಾಗ ಮಾಡುವುದಲ್ಲ, ಬದಲಿಗೆ ಯಾವ ಕರ್ಮವೇ ಇರಲಿ, ಅದನ್ನು ಮಾಡಿ-ಯಾವುದೇ ಫಲನ್ನು ಬಯಸದೇ ಇರುವುದು. ಆದ್ದರಿಂದ ಕರ್ಮತ್ಯಾಗ ಅಂದರೆ: ವೇದಾಧ್ಯಯನ ಬಿಡುವುದು, ಸಂಧ್ಯಾವಂದನೆ ಬಿಡುವುದು, ವೃತಾನುಷ್ಠಾನ ಇತ್ಯಾದಿಯನ್ನು ಬಿಡುವುದು ಎಂದಲ್ಲ. ಬದಲಿಗೆ ಸತ್ಕರ್ಮವನ್ನು ಮಾಡಿ ಅದರ ಫಲವನ್ನು ಬಯಸದೇ ಇರುವುದು ಎಂದರ್ಥ. ಯಾವ ಕರ್ಮವೇ ಇರಲಿ ಅದನ್ನು ಭಗವದ್ ಪ್ರೀತ್ಯರ್ತ ಮಾಡು-ಫಲ ಬಯಕೆಯಿಂದಲ್ಲ.
ಇಲ್ಲಿ ಕವಯಃ ಮತ್ತು ವಿಚಕ್ಷಣಾಃ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಲಾಗಿದೆ. ಶಬ್ದಾರ್ಥದ ಸಂಬಂಧವನ್ನು ತಿಳಿದವರು-ಕವಿಗಳು; ಶಬ್ದಾರ್ಥವನ್ನು ತಿಳಿದು ಅದನ್ನು ಅನುಭವಿಸಿ ಆಚರಿಸುವವರು ವಿಚಕ್ಷಣರು. “ಕವಿಗಳು ಮತ್ತು ವಿಚಕ್ಷಣರು ಸಂನ್ಯಾಸ ಮತ್ತು ತ್ಯಾಗಕ್ಕೆ ಈ ವಿವರಣೆಯನ್ನು ಕೊಡುತ್ತಾರೆ” ಎಂದಿದ್ದಾನೆ ಕೃಷ್ಣ.
