ಶ್ಲೋಕ – 14
ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮೇವ ಯೇ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ॥೧೪॥
ದೈವೀ ಹಿ ಏಷಾ ಗುಣಮಯೀ ಮಮ ಮಾಯಾ ದುರತ್ಯಯಾ ।
ಮಾಮ್ ಏವ ಯೇ ಪ್ರಪದ್ಯಂತೇ ಮಾಯಾಮ್ ಎತಾಮ್ ತರಂತಿ ತೇ-
ಗುಣಮಯವಾದ ನನ್ನ ಮಾಯೆ ತುಂಬಾ ಶಕ್ತಿಶಾಲಿ. ಅದನ್ನು ದಾಟುವುದು ಸುಲಭವಲ್ಲ.
ಯಾರು ನನ್ನಲ್ಲಿ ಮೊರೆ ಹೋಗುತ್ತಾರೆ ಅವರು ಈ ಮಾಯೆಯನ್ನು ದಾಟುತ್ತಾರೆ.
ತ್ರಿಗುಣಾತ್ಮಕವಾದ ಈ ಮೂರು ಭಾವಗಳಲ್ಲಿ ಇನ್ನೊಂದು ಮುಖವಿದೆ. ತ್ರಿಗುಣದ ಮಾನಿನಿ(ಶ್ರೀ ಲಕ್ಷ್ಮಿ)ಯೂ ಕೂಡಾ ಮೂರು ಮುಖದವಳು.
ಶ್ರೀ-ಭೂ-ದುರ್ಗ-ಇವು ತ್ರಿಗುಣವನ್ನು ನಿಯಂತ್ರಿಸುವ ಮೂರು ರೂಪಗಳು. ಈ ಗುಣಮಯೀ ತಾಯಿ ಮಾಯೆಯಾಗಿ ಜಗತ್ತಿನಲ್ಲಿ ತುಂಬಿದ್ದಾಳೆ.
ಇಡೀ ಜಗತ್ತನ್ನು ನಿಯಂತ್ರಿಸಬಲ್ಲ ಮಹಾ ಶಕ್ತಿ ಸ್ವರೂಪ ಆ ಮಾಯೆ ಭಗವಂತನ ಅಧೀನ.
ನಾವು ಭಗವಂತನನ್ನು ಕಾಣಬೇಕಾದರೆ ಈ ಮಾಯಾ ಪರದೆಯನ್ನು ಸರಿಸಿ ಕಾಣಬೇಕು.
ಆದರೆ ನಮ್ಮಿಂದ ಅದು ಅಸಂಭವ. ಈ ಕಾರಣದಿಂದ ಭಗವಂತನನ್ನು ಸೇರುವ ಏಕೈಕ ಮಾರ್ಗ ಭಗವಂತನಲ್ಲಿ ಪೂರ್ಣ ಶರಣಾಗತಿ.
ಆತ ಈ ಮಾಯಾ ಪರದೆಯನ್ನು ಸರಿಸಿ ದರ್ಶನ ಕೊಡಬಲ್ಲ. ಈ ಹಿಂದೆ ಹೇಳಿದಂತೆ ಸಂಸಾರದ ಮೋಹ ಪಾಶದಿಂದ ದೂರ ಸರಿದು ನಾರಾಯಣನಲ್ಲಿ ಶರಣಾದಲ್ಲಿ ಆತ ನಮ್ಮನ್ನು ಈ ಮಾಯಾ ಪರದೆಯಿಂದ ದಾಟಿಸುತ್ತಾನೆ.
ಭಗವಂತನಲ್ಲದೆ ನನಗೆ ಬೇರೆ ಅಸ್ತಿತ್ವವಿಲ್ಲ ಎನ್ನುವ ಎಚ್ಚರದಿಂದ ನಾವು ನಮ್ಮನ್ನು ಆತನಿಗೆ ಅರ್ಪಿಸಿಕೊಳ್ಳಬೇಕು.
ನವವಿಧ ಭಕ್ತಿಯಲ್ಲಿ ಇದು ಶ್ರೇಷ್ಠವಾದ ಭಕ್ತಿ. ಇದನ್ನು ಆತ್ಮನಿವೇದನ ಎನ್ನುತ್ತಾರೆ.ಮೊದಲು ನಮ್ಮೊಳಗಿರುವ ಭಗವಂತನನ್ನು ಅರಿತು,
ಅಹಂಕಾರ ಮಮಕಾರವನ್ನು ತೊರೆದು ನಮ್ಮನ್ನು ಸಂಪೂರ್ಣವಾಗಿ ಭಗವಂತನಲ್ಲಿ ಅರ್ಪಿಸಿಕೊಂಡಾಗ ಭಗವದ್ ಸಾಕ್ಷಾತ್ಕಾರವಾಗುತ್ತದೆ.
ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ಏಕ ಭಕ್ತಿ ಮತ್ತು ಏಕ ಶರಣಾಗತಿ.
ಕೃಷ್ಣ ಹೇಳುತ್ತಾನೆ “ಯಾರು ನನಗೇ ಶರಣಾಗುತ್ತಾರೋ ಅವರು ಪಾರಾಗಿಯೇ ಆಗುತ್ತಾರೆ” ಎಂದು. ಕೃಷ್ಣನ ಈ ಮಾತನ್ನು ಕೇಳಿದಾಗ ನಮ್ಮನ್ನು ಕೆಲವು ಪ್ರಶ್ನೆಗಳು ಕಾಡಬಹುದು. “ಎಲ್ಲರೂ ಏಕೆ ಭಗವಂತನಲ್ಲಿ ಶರಣಾಗುವುದಿಲ್ಲ? ಕೆಟ್ಟತನ ಜನರಲ್ಲಿ ಹೇಗೆ ಬರುತ್ತದೆ?” ಇತ್ಯಾದಿ. ಬನ್ನಿ ನಮ್ಮ ಪ್ರಶ್ನೆಗೆ ಉತ್ತರವನ್ನು ಮುಂದಿನ ಶ್ಲೋಕದಲ್ಲಿ ಹುಡುಕೋಣ.
