Bhagavad Gita
ಶ್ಲೋಕ – 04
ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ ಚ ।
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ॥೪॥
ಭೂಮಿಃ ಆಪಃ ಅನಲಃ ವಾಯುಃ ಖಮ್ ಮನಃ ಬುದ್ಧಿಃ ಏವ ಚ ।
ಅಹಂಕಾರಃ ಇತಿ ಇಯಮ್ ಮೇ ಭಿನ್ನ ಪ್ರಕೃತಿ ಅಷ್ಟಧಾ-
ಮಣ್ಣು, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ಧಿ,[ಸುಪ್ತಪ್ರಜ್ಞೆಯಿಂದ ಕೂಡಿದ]
ಅಹಂಕಾರ ಹೀಗೆ ನನ್ನ ಅಧೀನವಾದ ಈ ಜಡ ಪ್ರಕೃತಿ ಎಂಟು ಬಗೆಯಾಗಿದೆ.
ಈ ಶ್ಲೋಕ ಭಗವಂತನ ಪ್ರಪಂಚ ಸೃಷ್ಟಿಯ ವಿರಾಟ ರೂಪವನ್ನು ಸಮಷ್ಟಿಯಾಗಿ ತಿಳಿಸುತ್ತದೆ. ನಮಗೆ ತಿಳಿದಂತೆ ಸೃಷ್ಟಿ ಪೂರ್ವದಲ್ಲಿ ಈ ಸಂಪೂರ್ಣ ಜಗತ್ತು ಸೂಕ್ಷ್ಮ ರೂಪದಲ್ಲಿ ಆ ಭಗವಂತನ ಉದರದಲ್ಲಿ ನೆಲೆಗೊಂಡಿದ್ದು, ನಂತರ ಭಗವಂತ ಈ ಸೃಷ್ಟಿಯನ್ನು ನಿರ್ಮಿಸಿದ. ಹೀಗೆ ಮೊದಲು ನಿರ್ಮಾಣವಾದುದು ಈ ಜಡ ಪ್ರಕೃತಿ. ಇಲ್ಲಿ ಪಂಚಭೂತಗಳು(ಮಣ್ಣು, ನೀರು, ಬೆಂಕಿ, ಗಾಳಿ, ಆಗಸ) ಜೊತೆಗೆ ಮನಸ್ಸು, ಬುದ್ಧಿ ಮತ್ತು ಅಹಂಕಾರ. ಇವು ಒಟ್ಟಿಗೆ ಎಂಟು ಬಗೆ. ಈ ಇಡೀ ಸ್ಥೂಲಪ್ರಪಂಚ ಮಣ್ಣು ನೀರು ಬೆಂಕಿ ಗಾಳಿ ಆಕಾಶ ಇದರ ವಿಕಾರ. ಆದ್ದರಿಂದ ಈ ಪ್ರಪಂಚದಲ್ಲಿರುವ ಸಮಸ್ತ ಜಡಪದಾರ್ಥಗಳ ಮೂಲದ್ರವ್ಯ ಪಂಚಭೂತಗಳು.
ಇಲ್ಲಿ ನಮಗೆ ಒಂದು ಪ್ರಶ್ನೆ ಕಾಡಬಹುದು. ಅದೇನೆಂದರೆ ಪಂಚಭೂತಗಳ ಸೃಷ್ಟಿಯಲ್ಲಿ ಆಕಾಶದ ಸೃಷ್ಟಿ ಅಂದರೇನು? ಎಂದು. ಮೂಲತಃ ಆಕಾಶದ ಸೃಷ್ಟಿ ವಾಸ್ತವ ಅಲ್ಲ ಇದು ಸಾಪೇಕ್ಷವಾಗಿ . ಅಂತರಿಕ್ಷ (Space) ಮೊದಲೇ ಇತ್ತು. ಅದರಲ್ಲಿ ಭಗವಂತ ತನ್ನ ರೂಪವನ್ನು ಆವಿರ್ಭಾವ ಗೊಳಿಸುವುದೇ ಆಕಾಶ ಸೃಷ್ಟಿ. ಬಣ್ಣವಿಲ್ಲದ ಅಂತರಿಕ್ಷದಲ್ಲಿ ‘ಕಣ್ಣಿಗೆ ಕಾಣದ ನೀಲ ವರ್ಣದ(Ultraviolet)’ ಆಕಾಶ ಸೃಷ್ಟಿಯಾಯಿತು.(ಇದನ್ನು ಹದಿಮೂರನೇ ಶತಮಾನದಲ್ಲಿ ಮಧ್ವಾಚಾರ್ಯರು ಉಲ್ಲೇಖಿಸಿದ್ದಾರೆ) ಅಲ್ಲಿ ಕಂಪನ ಉಂಟಾಗಿ ಅದರಿಂದ ಗಾಳಿ ಹುಟ್ಟಿತು. ಗಾಳಿಯ ಕಂಪನದಿಂದ ಬೆಂಕಿ ಹಾಗು ಬೆಂಕಿಯಿಂದ ನೀರಿನ ಸೃಷ್ಟಿಯಾಯಿತು. ಈ ನೀರು ಗಟ್ಟಿಯಾಗಿ ಕಾಲ ಕ್ರಮೇಣ ಭೂಮಿಯಾಗಿ ವಿಕಾರಗೊಂಡಿತು. ಹೀಗೆ ಈ ಪಂಚಭೂತಗಳಿಂದ ಅನಂತ ವಸ್ತುಗಳ ನಿರ್ಮಾಣವಾಯಿತು. ಇದು ನಮ್ಮ ‘ಅನ್ನಮಯಕೋಶ’. ಬೆಂಕಿ ಗಾಳಿ ಆಕಾಶದಿಂದ ಪ್ರಾಣಮಯಕೋಶದ ಸೃಷ್ಟಿ. ಈ ಪ್ರಾಣಮಯಕೋಶದ ಒಳಗೆ ಮನಸ್ಸು ಮತ್ತು ಬುದ್ಧಿಯಿಂದಾದ ಮನೋಮಯಕೋಶ. ನಂತರ ನಮ್ಮ ನೆನಪಿನ ಶಕ್ತಿಯ ಅಹಂಕಾರತತ್ವ(awareness of self, ಚಿತ್ತ, ಚೇತನ)ದಿಂದಾದ ವಿಜ್ಞಾನಮಯಕೋಶ ಸೃಷ್ಟಿಯಾಯಿತು. ಇಲ್ಲಿ ಮನಸ್ಸು ಸೃಷ್ಟಿಯಾಯಿತು ಎಂದರೆ ಮನಸ್ಸಿನ ಅಭಿಮಾನಿ ದೇವತೆಯ ಸೃಷ್ಟಿಯಾಯಿತು ಎಂದರ್ಥ; ಭೂಮಿ ಸೃಷ್ಟಿಯಾಯಿತು ಎಂದರೆ ಈ ಜಡವಾದ ಭೂಮಿಯ ಜೊತೆಗೆ ಭೂಮಿಯ ಅಭಿಮಾನಿ ದೇವತೆಯ ಸೃಷ್ಟಿಯಾಯಿತು ಎಂದರ್ಥ. ಅದೇ ರೀತಿ ವಾಯುವಿನ ಸೃಷ್ಟಿ ಎಂದಾಗ ಅಲ್ಲಿ ವಾಯುವಿನ ಜೊತೆಗೆ ನಲವತ್ತೊಂಬತ್ತು ದೇವತೆಗಳ ಸೃಷ್ಟಿಯಾಯಿತು ಎಂದರ್ಥ. ನಮಗೆ ತಿಳಿದಂತೆ ಭೂಮಿಯನ್ನು ಆವರಿಸಿರುವ ವಾಯುವಿನ ಪದರು ನಲವತ್ತೊಂಬತ್ತು. ಭೂಮಿಯಿಂದ ವಿವಿಧ ದೂರದಲ್ಲಿ ಗಾಳಿಯ ವಿವಿಧ ಒತ್ತಡಕ್ಕನುಗುಣವಾಗಿ ಈ ವಿಭಾಗ. ಇದನ್ನು ನಿಯಮಿತವಾಗಿ ಆಯಾ ಅಭಿಮಾನಿ ದೇವತೆಗಳು ನಿರ್ವಹಿಸುತ್ತಾರೆ. (‘ಭಾರದ್ವಾಜ ಸಂಹಿತದಲ್ಲಿ ಈ ಬಗ್ಗೆ ಮತ್ತು ವಿಮಾನ ತಾಂತ್ರಿಕತೆ ಬಗ್ಗೆ ಸಂಪೂರ್ಣ ವಿವರವನ್ನು ಕಾಣಬಹುದು). ಹೀಗೆ ಭಗವಂತನ ಅಧೀನವಾಗಿ ಅಷ್ಟರೂಪದ ಅಕ್ಷರಪ್ರಕೃತಿ ರೂಪುಗೊಂಡಿತು. ಈ ಅಷ್ಟ ವಿಧದ ಪ್ರಪಂಚದಲ್ಲಿ ಅಷ್ಟಾಕ್ಷರ ವಾಚ್ಯನಾಗಿ ಭಗವಂತ ತುಂಬಿದ.
ನಾದಸೃಷ್ಟಿಯ ಮೊದಲ ಸೃಷ್ಟಿ ಓಂಕಾರ. ಓಂಕಾರದಲ್ಲಿ ಎಂಟು ಅಕ್ಷರಗಳಿವೆ. ನಾಭಿಯಿಂದ ಹೊರಟು ಉಚ್ಚಾರದ ಕೊನೆಯ ತನಕ ಒಟ್ಟು ಎಂಟು ಅಕ್ಷರಗಳು. ಅವುಗಳೆಂದರೆ: ಅಕಾರ , ಉಕಾರ, ಮಕಾರ, ನಾದ, ಬಿಂದು, ಕಲೆ, ಶಾಂತ, ಅತಿಶಾಂತ. ಹೀಗೆ ಎಂಟು ಅಕ್ಷರದಿಂದ ವಾಚ್ಯನಾಗಿ; ವಿಶ್ವ, ತೈಜಸ, ಪ್ರಾಜ್ಞ, ತುರೀಯ , ಆತ್ಮ, ಅಂತರಾತ್ಮ, ಪರಮಾತ್ಮ ಮತ್ತು ಜ್ಞಾನಾತ್ಮ ಎನ್ನುವ ಎಂಟು ರೂಪದಲ್ಲಿ ಭಗವಂತ ಈ ಅಷ್ಟವಿಧ ಪ್ರಕೃತಿಯಲ್ಲಿ ತುಂಬಿದ. ಹೀಗೆ ಇಡೀ ಪ್ರಪಂಚ ಅಷ್ಟ ವಿಧದಲ್ಲಿ ವಿಕಾರಗೊಂಡಿತು.
(ಅಧ್ಯಾತ್ಮದಲ್ಲಿ ಪ್ರತಿಯೊಂದು ಸಂಖ್ಯಯ ಹಿಂದೆ ಒಂದು ವೇದಾಂತವಿದೆ. ಸೃಷ್ಟಿ ಪ್ರಕ್ರಿಯೆಯಲ್ಲಿ ಎಂಟರ ಮಹತ್ವವನ್ನು ಇಲ್ಲಿ ನೋಡಿದೆವು. ಬನ್ನಂಜೆಯವರ ‘ಅಂಕೆಯಲ್ಲಿ ಅಧ್ಯಾತ್ಮ’ ಎನ್ನುವ ಪುಟ್ಟ ಪುಸ್ತಕ ಈ ವಿಷಯದ ಮೇಲೆ ಬೆಳಕು ಚಲ್ಲುತ್ತದೆ).

[…] ಇದನ್ನು ಓದಿ: ಭಗವದ್ಗೀತೆ ಆಧ್ಯಾಯ -7 ಶ್ಲೋಕ-4 […]