ಗಾಂಧಿನಗರ: ರಾಜ್ಯದಲ್ಲಿ ಮಧ್ಯ ಮತ್ತು ಮಾದಕದ್ರವ್ಯಗಳ ವ್ಯಸನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಗುಜರಾತ್ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. 2026-27ನೇ ಹಣಕಾಸು ವರ್ಷದಲ್ಲಿ ರಾಜ್ಯದ ಎಲ್ಲಾ 34 ಜಿಲ್ಲಾ ಆಸ್ಪತ್ರೆಗಳಲ್ಲಿ ವೈಜ್ಞಾನಿಕ ಮಾದರಿಯ ವ್ಯಸನಮುಕ್ತಿ ಕೇಂದ್ರಗಳನ್ನು (De-Addiction Centres) ಸ್ಥಾಪಿಸಲು ₹14.90 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ವ್ಯಸನಮುಕ್ತಿ ಕೇಂದ್ರದ ಮಾದರಿ ಮತ್ತು ಸೌಲಭ್ಯಗಳು: ಈ ಪ್ರತಿಯೊಂದು ನೂತನ ವ್ಯಸನಮುಕ್ತಿ ಕೇಂದ್ರಗಳು 15 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿರಲಿವೆ. ಇಲ್ಲಿ ಒಳರೋಗಿ (IPD) ಮತ್ತು ಹೊರರೋಗಿ (OPD) ವಿಭಾಗಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ಕೇಂದ್ರಗಳಲ್ಲಿ ವೈಜ್ಞಾನಿಕ ನಿರ್ವಿಷೀಕರಣ (Detoxification), ವ್ಯಸನಮುಕ್ತಿ ಚಿಕಿತ್ಸೆ, ಮಾನಸಿಕ ಆರೋಗ್ಯ ಸಲಹೆ, ವೈದ್ಯಕೀಯ ಕೌನ್ಸೆಲಿಂಗ್, ಕುಟುಂಬದವರಿಗೆ ಆಪ್ತಸಲಹೆ ಹಾಗೂ ಪುನರ್ವಸತಿ ಕಲ್ಪಿಸಲಾಗುವುದು. ಪ್ರತಿಯೊಂದು ಕೇಂದ್ರದಲ್ಲೂ ವೈದ್ಯರು, ಶುಶ್ರೂಷಕರು (Nurses), ಕೌನ್ಸಿಲರ್ಗಳು ಮತ್ತು ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಪರಿಣಿತ ತಂಡ ಕಾರ್ಯನಿರ್ವಹಿಸಲಿದೆ.
ಖರೀದಿ ಮತ್ತು ಮೇಲ್ವಿಚಾರಣೆ: ಸಾರ್ವಜನಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಭಾಗವಾಗಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಇವುಗಳಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಕೇಂದ್ರ ಸರ್ಕಾರದ ‘ಗವರ್ನ್ಮೆಂಟ್ ಇ-ಮಾರ್ಕೆಟ್ಪ್ಲೇಸ್’ (GeM) ಪೋರ್ಟಲ್ ಮೂಲಕವೇ ಪಾರದರ್ಶಕವಾಗಿ ಸಸಂಪ್ಲೈ ಮಾಡಿಕೊಳ್ಳಲಾಗುತ್ತದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ನಿಯಮಿತ ಮೇಲ್ವಿಚಾರಣೆ, ಸಾಮಾಜಿಕ ತಪಾಸಣೆ (Social Audit) ಹಾಗೂ ತೃತೀಯ ಪಕ್ಷದ ಪರಿಶೀಲನೆಗಳನ್ನು (Third-party verification) ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.
