ಚನ್ನರಾಯಪಟ್ಟಣ: ಸಹಕಾರಿ ತತ್ವದಡಿ ಎಲ್ಲರೂ ಒಗ್ಗಟ್ಟಿನಿಂದ ಸಾಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹಾಸನ ಜಿಲ್ಲಾ ಯೂನಿಯನ್ ಬ್ಯಾಂಕಿನ ಮಾಜಿ ಅಧ್ಯಕ್ಷ ವಿ.ಎನ್. ರಾಜಣ್ಣ ಹೇಳಿದರು.
ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ವಡ್ಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ರೈತರ ಅಭ್ಯುದಯಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಒಂದು ಹಂತದಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರವು ತನ್ನ ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂಪಿಸಿದ ಪೈಲಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವು ಸುಮಾರು ₹2 ಸಾವಿರ ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ₹1,300 ಕೋಟಿಗೂ ಅಧಿಕ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಚನ್ನರಾಯಪಟ್ಟಣ ಕ್ಷೇತ್ರದ ಶಾಸಕ ಬಾಲಕೃಷ್ಣ ಅವರ ಸಹಕಾರದಿಂದ ತಾಲೂಕಿನಲ್ಲಿ ಸಹಕಾರಿ ಕ್ಷೇತ್ರವು ಉತ್ತಮ ಸೇವೆ ಸಲ್ಲಿಸುತ್ತಿದೆ. ಕರ್ನಾಟಕ ಸಹಕಾರ ಮಾರಾಟ ಮಂಡಳಿಯ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಅವರು ಫೆಡರೇಷನ್ ನಿರ್ದೇಶಕರಾದ ಬಳಿಕ ತಾಲೂಕಿನ ವಿವಿಧ ಸಹಕಾರ ಸಂಘಗಳಿಗೆ ವಿಶೇಷ ಅನುದಾನ ಒದಗಿಸುವ ಮೂಲಕ ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ನಟರಾಜು ಅವರು ಸಂಘದ ಖರ್ಚು-ವೆಚ್ಚಗಳ ವಿವರವನ್ನು ಸಭೆಗೆ ಮಂಡಿಸಿ, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆರ್. ಮಂಜಪ್ಪ ವಹಿಸಿದ್ದರು. ಉಪಾಧ್ಯಕ್ಷ ನಾಗೇಶ್, ನಿರ್ದೇಶಕರಾದ ದಿನೇಶ್, ಯೋಗೇಶ್ ಸಿ.ಬಿ., ಹರೀಶ್, ರಾಮಕೃಷ್ಣ, ವಿ.ಆರ್. ದಿನೇಶ್, ಚಂದ್ರಮ್ಮ, ಶಿವರಾಮು, ಮಮತಾ, ಕಾಳಮ್ಮ, ಮಾಜಿ ಅಧ್ಯಕ್ಷರಾದ ಸಿ.ಸಿ. ರವೀಶ್, ವಡ್ಡರಹಳ್ಳಿ ಗಣೇಶಗೌಡ, ವಿ.ಆರ್. ರಾಜೇಶ್, ವಾಸು ಯೋಗೇಶ್, ಗುರಿಗಾರನಹಳ್ಳಿ ಯೋಗಣ್ಣ, ಸಿಬ್ಬಂದಿಗಳಾದ ರಮೇಶ್, ರಾಘವೇಂದ್ರ, ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
* ಮಂಜುನಾಥ್ ಐ.ಕೆ
