ಚನ್ನರಾಯಪಟ್ಟಣ: ರಾಜ್ಯ ಮಟ್ಟದ 10,000 ಮೀಟರ್ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿರುವ ಚನ್ನರಾಯಪಟ್ಟಣದ ಸಿ.ಎ. ಸೃಜನ್ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿಳಿಕೆರೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ 10,000 ಮೀಟರ್ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಮೈಸೂರಿನ ಯುವರಾಜ ಕಾಲೇಜಿನ ವಿದ್ಯಾರ್ಥಿ ಸಿ.ಎ. ಸೃಜನ್ ಅತ್ಯುತ್ತಮ ಪ್ರದರ್ಶನ ನೀಡಿದರು. ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾದರು.

ಚನ್ನರಾಯಪಟ್ಟಣದ ಶ್ರೀಮತಿ ಜ್ಯೋತಿಲಕ್ಷ್ಮಿ ಹಾಗೂ ಸಿ.ಎನ್. ಅರುಣ್ ಕುಮಾರ್ ಅವರ ಪುತ್ರರಾದ ಸೃಜನ್ ಅವರ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಸ್ಪರ್ಧೆಯನ್ನು ಆಯೋಜಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಸೃಜನ್ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು.

ಮೈಸೂರಿನ ಮಹಾರಾಜ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಟಿ.ಎಸ್. ರವಿ ಅವರು ಸೃಜನ್ ಅವರನ್ನು ಅಭಿನಂದಿಸಿ, ಮುಂಬರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಕರ್ನಾಟಕ ರಾಜ್ಯ ಹಾಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
- ಮಂಜುನಾಥ್ ಐ.ಕೆ.
