ಚನ್ನರಾಯಪಟ್ಟಣ: ನವೆಂಬರ್ 1ರಂದು ತಾಲೂಕು ಆಡಳಿತದ ವತಿಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ, ಸಡಗರದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ದಲಿತಪರ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ರೂಪುರೇಷೆ, ಸಿದ್ಧತೆಗಳು ಹಾಗೂ ವಿವಿಧ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಜವಾಬ್ದಾರಿಗಳನ್ನು ವಹಿಸಲಾಯಿತು.
ಕನ್ನಡ ನಾಡು-ನುಡಿ, ಭಾಷೆ ಹಾಗೂ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗಾಗಿ ಎಲ್ಲರೂ ಕೈಜೋಡಿಸಬೇಕು. ಕನ್ನಡ ರಾಜ್ಯೋತ್ಸವವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವ ಮೂಲಕ ಕನ್ನಡದ ಗೌರವವನ್ನು ಹೆಚ್ಚಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.
ಕನ್ನಡ ಭಾಷೆ, ನಾಡು-ನುಡಿ ಹಾಗೂ ನೀರಿಗಾಗಿ ಹೋರಾಟ ನಡೆಸಿದ ಮಹನೀಯರನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ವಿದ್ಯಾರ್ಥಿಗಳಿಗೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ನಾಡು-ನುಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲೆಗಳ ಹಾಗೂ ನವೋದಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಬೇಕು ಎಂದು ಸೂಚಿಸಿದರು. ಕಾರ್ಯಕ್ರಮಕ್ಕೆ ಯಾವುದೇ ಇಲಾಖೆಯ ಅಧಿಕಾರಿಗಳು ಗೈರಾಗದೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದವರು: ತಹಶೀಲ್ದಾರ್ ಜೆ.ಎಸ್. ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸತೀಶ್, ಉಪತಹಶೀಲ್ದಾರ್ ಅನಿಲ್ ಕುಮಾರ್, ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಆನಂದ್ ಕಾಳೆನಹಳ್ಳಿ, ಕರುನಾಡ ಸರ್ವಜನ ವೇದಿಕೆಯ ರಾಜ್ಯಾಧ್ಯಕ್ಷ ಜನಿವಾರ ಶರತ್, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಡ್ಡರಹಳ್ಳಿ ಗಣೇಶ್ ಗೌಡ, ತಾಲೂಕು ಅಧ್ಯಕ್ಷ ಮಧು ಕರೆಡೇವು, ಕರ್ನಾಟಕ ವೀರ ಸಮರ ಸೇನೆಯ ತಾಲೂಕು ಅಧ್ಯಕ್ಷ ಅಂತನಹಳ್ಳಿ ಸ್ವಾಮಿಗೌಡ, ಕೃಷ್ಣೇಗೌಡ, ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಮಂಜಣ್ಣ, ಟಿಎಪಿಸಿಎಂಎಸ್ನ ಮಾಜಿ ಅಧ್ಯಕ್ಷ ಮರಗೂರು ಅನಿಲ್, ಮಾಜಿ ಪುರಸಭಾ ಅಧ್ಯಕ್ಷ ಕೋಟೆ ಮೋಹನ್, ಹಿರಿಯ ಕಲಾವಿದ ಮಹದೇವ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾಜಕುಮಾರ, ಕನ್ನಡಪರ ಹೋರಾಟಗಾರರಾದ ಪುರಿ ಮಂಜುನಾಥ್, ಬಿ.ಪಿ. ಧರ್ಮರಾಜ್, ಗಾಯಕ ಪ್ರೇಮ್, ದಿಂಡಗೂರು ಗೋವಿಂದರಾಜು, ಗದ್ದೆ ಬಿಂಡೇನಹಳ್ಳಿ ಧರ್ಮರಾಜ್, ವಿರೂಪಾಕ್ಷಪುರ ಪ್ರಕಾಶ್, ಗುರಿಗಾರನಹಳ್ಳಿ ಯೋಗೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು
ವರದಿ : ಮಂಜುನಾಥ್ ಐ ಕೆ
