ಚನ್ನರಾಯಪಟ್ಟಣ, ಜು. 21: ತಾಲೂಕು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಗಾನಕೋಗಿಲೆ ಎಸ್. ಜಾನಕಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡ ಅವರ ನಿಧನದ ಅಂಗವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಇಬ್ಬರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ದಕ್ಷಿಣ ಭಾರತದ ಗಾನಕೋಗಿಲೆ ಎಸ್. ಜಾನಕಿ ಅವರ ಸಂಗೀತ ಸೇವೆ ಅವಿಸ್ಮರಣೀಯವಾಗಿದೆ. 14 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಅವರು, ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಕನ್ನಡ ನಾಡಿನೊಂದಿಗೆ ವಿಶೇಷ ನಂಟು ಹೊಂದಿದ್ದ ಅವರು, ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್ ಮಾತನಾಡಿ, ತಮ್ಮ ಸುಮಧುರ ಕಂಠದ ಮೂಲಕ ಕೋಟ್ಯಾಂತರ ಸಂಗೀತಾಭಿಮಾನಿಗಳ ಮನ ಗೆದ್ದ ಎಸ್. ಜಾನಕಿ ಅವರ ಸಾಧನೆ ಶಾಶ್ವತವಾಗಿದ್ದು, ಅವರ ಹಾಡುಗಳು ಸದಾ ಜೀವಂತವಾಗಿರಲಿವೆ ಎಂದರು.
ಗೋಕಾಕ್ ಪುಟ್ಟಣ್ಣ ಮಾತನಾಡಿ, ಬಾಲ್ಯದಿಂದಲೇ ಎಸ್. ಜಾನಕಿ ಅವರ ಹಾಡುಗಳನ್ನು ಕೇಳುತ್ತ ಬೆಳೆದಿದ್ದು, ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಚನ್ನಮ್ಮ ದೇವೇಗೌಡ ಅವರ ಸರಳತೆ, ಸೇವಾ ಮನೋಭಾವ ಹಾಗೂ ಕುಟುಂಬ ಮೌಲ್ಯಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್, ರವಿ ನಾಕಲಗೂಡು, ತಾಲೂಕು ಶಂಕರಾಚಾರ್ಯ, ಗೋಕಾಕ್ ಪುಟ್ಟಣ್ಣ, ಆನಂದ್ ಕಾಳೆನಹಳ್ಳಿ, ಸಾಹಿತಿ ಜಯಂತಿ, ತುಮಕೂರು ಲೀಲಾವತಿ, ಪ್ರೇಮಮ್ಮ, ಕಲಾವಿದರಾದ ಮಹದೇವ್, ಸಿ.ಜಿ. ಸೋಮಶೇಖರ್, ಸಮಾಜಸೇವಕರಾದ ಎಸ್.ಎಂ.ಆರ್. ರಮೇಶ್, ರಾಜಕುಮಾರ್, ಮನೋಹರ್, ರೇವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
