ಚನ್ನರಾಯಪಟ್ಟಣ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನುಗ್ಗೆಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಿತು. ಈ ಕಾರ್ಯಕ್ರಮವನ್ನು ಜುಮ್ಮಾ ಮಸೀದಿ ಕಮಿಟಿ, ಈದ್ ಮಿಲಾದ್ ಕಮಿಟಿ ಮತ್ತು ನಾರಾಯಣ ಆಸ್ಪತ್ರೆ (ಮೈಸೂರು) ಹಾಗೂ ಶಿವ್ಯ ಆಸ್ಪತ್ರೆ (ಹಾಸನ) ಅವರ ಸಂಯುಕ್ತ ಸಹಯೋಗದಲ್ಲಿ ನಡೆಸಲಾಗಿದೆ.
ಶಿಬಿರವನ್ನು ಭರತ್ ಕುಮಾರ್ ಹೆಚ್.ಜಿ. ಮತ್ತು ವೇದಿಕೆ ಗಣ್ಯರು ಉದ್ಘಾಟಿಸಿ ಮಾತನಾಡಿ, “ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡುವ ಮೂಲಕ ಮೊದಲ ಹಂತದಲ್ಲೇ ಕಾಯಿಲೆಯನ್ನು ತಡೆಯಬಹುದು. ಈ ರೀತಿಯ ಶಿಬಿರಗಳು ಅತ್ಯಂತ ಪರಿಣಾಮಕಾರಿ.” ಎಂದರು.

ಡಾ. ಭವ್ಯ ಸುನಿಲ್ ಮಾತನಾಡಿ, ಅವರು ಹೆಣ್ಣು ಮಕ್ಕಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಮತ್ತು ಬಂಜೆತನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಡಾ. ದಿಶಾಂತ್ ಅವರು ಉಚಿತ ಆರೋಗ್ಯ ಶಿಬಿರವು ಸಾರ್ವಜನಿಕರಿಗೆ ತುಂಬಾ ಉಪಯುಕ್ತವಾಗುತ್ತದೆ ಮತ್ತು ರಕ್ತದಾನದಿಂದ ಜನರ ಜೀವ ಉಳಿಸುವ ಮಹತ್ವವನ್ನು ವಿವರಿಸಿದರು.

ಈ ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣಿನ ತಪಾಸಣೆ, ಬಿ.ಪಿ., ಶುಗರ್, ಸ್ತ್ರೀರೋಗ ತಪಾಸಣೆ ಮತ್ತು ಇತರೆ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 227 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಜಬಿವುಲ್ಲಾ ಬೇಗ್ ಸಿ.ಎನ್. (ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ತಾಲ್ಲೂಕು ಘಟಕ), ಡಾ. ನವೀನ್ (ನಾರಾಯಣ ಆಸ್ಪತ್ರೆ, ಮೈಸೂರು), ಇಲಿಯಾಸ್ (ಜುಮ್ಮಾ ಮಸೀದಿ ಕಮಿಟಿ, ನುಗ್ಗೆಹಳ್ಳಿ), ಡಾ. ಸುಹಾಸ್, ಡಾ. ನವೀನ್, ಉದಯಶಂಕರ್ (ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ), ಹಾಗೂ ಮಸೀದಿ ಮತ್ತು ಈದ್ ಮಿಲಾದ್ ಕಮಿಟಿ ಸದಸ್ಯರು ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
- ಮಂಜುನಾಥ ಐ ಕೆ.
