ಟಿ.ನರಸೀಪುರ : ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಇನ್ಸ್ ಪೆಕ್ಟರ್ ಧನಂಜಯ್ , ಸಬ್ ಇನ್ಸ್ ಪೆಕ್ಟರ್ ಜಗದೀಶ್ ಧೂಳ್ ಶೆಟ್ಟಿ ಹಾಗೂ ಅವರ ಇತರೆ ಸಿಬ್ಬಂದಿಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅವರ ಕರ್ತವ್ಯವನ್ನು ನಿಭಾಯಿಸಿದ್ದು ಅಂತಹ ದಕ್ಷ ಅಧಿಕಾರಿಗಳ ವಿರುದ್ಧ ಇಲ್ಲ,ಸಲ್ಲದ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತೆಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಡಾ.ಬಿ.ಮರಯ್ಯ ತಿಳಿಸಿದರು.

ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಲಿತ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯದ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಅನಗತ್ಯ ತೊಂದರೆ ನೀಡುತ್ತಿದ್ದರೆ ನೇರವಾಗಿ ನಾವುಗಳೇ ಖುದ್ದು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು.ಆದರೆ ಅವರ ಮೇಲಾಧಿಕಾರಿಗಳಿಗೆ ದೂರು ನೀಡುವ ಅಗತ್ಯವಿರಲಿಲ್ಲ.ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಲಾಠಿ ರುಚಿ ತೋರಿಸುವುದು ಅನಿವಾರ್ಯ ಕೂಡ.ಅದರಂತೆ ಪರಿಸ್ಥಿತಿ ನಿಭಾಯಿಸಿದ್ದಾರೆ. ಈಗ ಕೆಲವು ಸಂಘ,ಸಂಸ್ಥೆಗಳ ಮುಖಂಡರು ಇನ್ಸ್ಪೆಕ್ಟರ್ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ.
ಇನ್ಸ್ಪೆಕ್ಟರ್ ಮೇಲೆ ಗುರುತರ ಆರೋಪ ಮಾಡಿರುವ ಕೆಲವು ಮುಖಂಡರು ಬಹಳ ಸೂಕ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸುವ ಅಗತ್ಯವಿದೆ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವ ಟಿ.ನರಸೀಪುರ ಕ್ಷೇತ್ರದಲ್ಲಿ ದಿನ ನಿತ್ಯ ಅಧಿಕಾರಿಗಳ ಮೇಲೆ ಗಲಾಟೆ ಮಾಡುತ್ತಿದ್ದರೆ ಜನರ ಸೇವೆ ಮಾಡಲು ಯಾವ ಅಧಿಕಾರಿಗಳು ಈ ಕ್ಷೇತ್ರಕ್ಕೆ ಬರುತ್ತಾರೆ ಇದಕ್ಕೆ ಯಾರು ಜವಾಬ್ದಾರರಾಗುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಟಿ.ನರಸೀಪುರದಲ್ಲಿ ಕಾನೂನು ಸುವ್ಯವಸ್ಥೆ ಯಾವ ರೀತಿ ತಳಬದಿಯಲ್ಲಿ ಇದೆ ಎಂಬುದನ್ನು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಅವಲೋಕಿಸಬೇಕು.ಮೇಲಾಧಿಕಾರಿಗಳಿಗೆ ಸ್ಥಳೀಯ ಅಧಿಕಾರಿಗಳ ಮೇಲೆ ದೂರುಗಳು ಬಂದಾಗ ಪರಿಶೀಲಿಸಿ ಸುಖಾ ಸುಮ್ಮನೆ ಯಾರೋ ಮಾತನ್ನ ಕೇಳಿಕೊಂಡು ದಕ್ಷ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಮುಂದಾದರೆ ನಾವು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಾ.ಬಿ.ಮನ್ಸೂರ್ ಅಲಿ,ಜಿಲ್ಲಾ ಗ್ಯಾರೆಂಟಿ ಅನುಷ್ಟಾನ ಪ್ರಾಧಿಕಾರ ಉಪಾಧ್ಯಕ್ಷ ಹುಣಸೂರು ಬಸವಣ್ಣ,ಬೈರಾಪುರ ಎಚ್ .ನಾಗರಾಜು,ಪ್ರಕಾಶ್,ಅಕ್ಬರ್ ಪಾಷ,ಬೈರಾಪುರ ಯಜಮಾನ್ ಚಿಕ್ಕಲಿಂಗಯ್ಯ ಸೇರಿದಂತೆ ಇತರರಿದ್ದರು.
ವರದಿ:ಎಂ.ನಾಗೇಂದ್ರಕುಮಾರ್
