ಚನ್ನರಾಯಪಟ್ಟಣ : ತಾಲೂಕಿನ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕಾಡುಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ದೇಗುಲಗಳು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಅವುಗಳ ಜೀರ್ಣೋದ್ಧಾರ ಕಾರ್ಯಕ್ಕೆ ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಶ್ರೀ ಕರಿ ವೃಷಭ ಶಿವಯೋಗೀಶ್ವರ ಸ್ವಾಮೀಜಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸ್ವಾಮೀಜಿ, “ಶ್ರೀ ಕಾಡುಬಸವೇಶ್ವರ ಸ್ವಾಮಿ ಹಾಗೂ ಶ್ರೀ ವೀರಾಂಜನೇಯ ಸ್ವಾಮಿ ಕ್ಷೇತ್ರಗಳ ಮಹಿಮೆ ಮತ್ತು ಶಕ್ತಿ ಅಪಾರವಾಗಿದೆ. ಈ ಜೋಡಿ ದೇಗುಲಗಳ ಜೀರ್ಣೋದ್ಧಾರ ಪೂರ್ಣಗೊಂಡ ನಂತರ ಈ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ” ಎಂದು ಹೇಳಿದರು.

ಮುಂದಿನ ಶ್ರಾವಣ ಮಾಸದ ಶುಭ ಮುಹೂರ್ತದಲ್ಲಿ ಜನಪ್ರತಿನಿಧಿಗಳು ಮತ್ತು ಮುಖಂಡರ ನೇತೃತ್ವದಲ್ಲಿ ದೇಗುಲಗಳ ಜೀರ್ಣೋದ್ಧಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದ ಅವರು, ಈ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಭಕ್ತಾದಿಗಳು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ನವಿಲೇ ಎನ್. ಪರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಪುರಸಭೆಯ ಮಾಜಿ ಅಧ್ಯಕ್ಷರಾದ ಸಿ.ಎನ್. ಶಶಿಧರ್, ನಾಗರಾಜ್, ಶ್ರೀಮತಿ ಅನುಸೂಯ ಪ್ರಕಾಶ್, ಮಾಜಿ ಸದಸ್ಯ ರವೀಶ್, ಅಂಗಡಿ ಮಂಜುನಾಥ್, ನಾಮನಿರ್ದೇಶಿತ ಸದಸ್ಯರಾದ ಮೇಘಲಕೇರಿ ರವಿ, ಎ.ಪಿ. ನಂದೀಶ್, ಹಿರಿಯ ಪತ್ರಕರ್ತ ರವಿ ನಾಕಲಗೂಡು, ಉಪನ್ಯಾಸಕ ಎವಿಕೆ ಪ್ರಕಾಶ್, ಉದ್ಯಮಿ ಪ್ರಭುಸ್ವಾಮಿ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ
