ಚನ್ನರಾಯಪಟ್ಟಣ, ಜು. 2: ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಡೆದ 6ನೇ ಹಾಸನ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸ್ನೇಹಮಯಿ ವಿವೇಕಾನಂದ ಯೋಗ ಮಂದಿರದ ಯೋಗಪಟುಗಳು ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿ ಹಾಸನ ಜಿಲ್ಲಾ ಸಮಗ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ಮಂಜುನಾಥ್ ಕೆ. ಅಡಗೂರು ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಯೋಗಪಟುಗಳು ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು. ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನ್ಯಾಯಾಂಗ ಇಲಾಖೆ, ಪೂರ್ಣಚಂದ್ರ ಪಬ್ಲಿಕ್ ಶಾಲೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ 12 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಕೆ.ಯು. ಕೀರ್ತನ ದ್ವಿತೀಯ, ವಂಶಿತ ತೃತೀಯ ಸ್ಥಾನ ಪಡೆದರು. 12 ರಿಂದ 15 ವರ್ಷದ ಬಾಲಕರ ವಿಭಾಗದಲ್ಲಿ ಜಿ.ಎಸ್. ವಿಷ್ಣು ದ್ವಿತೀಯ ಸ್ಥಾನ ಗಳಿಸಿದರು.
30 ರಿಂದ 40 ವರ್ಷದ ಪುರುಷರ ವಿಭಾಗದಲ್ಲಿ ಚೇತನ್ ದ್ವಿತೀಯ ಹಾಗೂ ವಿ.ಜಿ. ಪ್ರಸನ್ನ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಟಿ. ರಾಧಿಕಾ ತೃತೀಯ ಸ್ಥಾನ ಗಳಿಸಿದರು. 40 ರಿಂದ 50 ವರ್ಷದ ಮಹಿಳೆಯರ ವಿಭಾಗದಲ್ಲಿ ಕೋಮಲ ತೃತೀಯ ಸ್ಥಾನ ಪಡೆದು ಸಂಸ್ಥೆಗೆ ಸಮಗ್ರ ಪ್ರಶಸ್ತಿ ತಂದುಕೊಟ್ಟರು.
ಸ್ಪರ್ಧೆಗೆ ಮುನ್ನ ಸಂಸ್ಥೆಯ ಯೋಗಪಟು ಎಸ್.ಎಂ. ವಿಸ್ಮಿತ ಅವರು ನೀಡಿದ ಬಾಕ್ಸ್ ಯೋಗ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದು, ನೆರೆದಿದ್ದ ಗಣ್ಯರು ಹಾಗೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು ಎಂದು ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ವಿವೇಕಾನಂದ ಯೋಗ ಮಂದಿರದ ಅಧ್ಯಕ್ಷ ಮಂಜುನಾಥ್ ಶೆಟ್ಟಿಹಳ್ಳಿ, ಮಹಿಳಾ ಯೋಗ ಶಿಕ್ಷಕಿ ಚೇತನಾ, ಯೋಗಪಟುಗಳಾದ ಟಿ. ರಾಧಿಕಾ, ವಿ.ಜಿ. ಪ್ರಸನ್ನ ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
