ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ದಡಿಘಟ್ಟ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ (ದಡಿಘಟ್ಟದಮ್ಮ) ಸಿಡಿಲುಕಲ್ಲು ಜಾತ್ರಾ ಮಹೋತ್ಸವವು ಸಡಗರ ಸಂಭ್ರಮದಿಂದ ನಡೆಯಿತು.
*ಪುರಾಣ ಪ್ರಸಿದ್ಧ ಸಿಡಿಲುಕಲ್ಲು:*
ಪಾಂಡವರು ತಮ್ಮ 14 ವರ್ಷ ವನವಾಸದ ಅವಧಿಯಲ್ಲಿ ಈ ಸಿಡಿಲುಕಲ್ಲುಗಳಿಂದ ಆಟವಾಡುತ್ತಿದ್ದರು ಎಂಬ ಪ್ರತೀತಿ ಇರುವ ಈ ಸ್ಥಳದಲ್ಲಿ ಭಕ್ತರು ಕಲ್ಲುಗಳ ಮೇಲೆ ಕುಳಿತು, ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಸಗಣಿ ಓಕಳಿಯಾಟ, ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ, ಕೋಲಾಟ, ವಿಶೇಷ ಪೂಜೆ, ಹೂವಿನ ಅಲಂಕಾರ, ದೇವರ ಮೆರವಣಿಗೆ, ಸಿಡಿಮದ್ದು ಪ್ರದರ್ಶನ, ಮನೆ ಮನೆ ದೀಪೋತ್ಸವ ಕಾರ್ಯಕ್ರಮ ಸೇರಿದಂತೆ ಜಾನಪದ ಶೈಲಿಯ ಹಲವು ಕಾರ್ಯಕ್ರಮಗಳು ನಡೆದವು.
ಜಾತ್ರೆ ಎಂದರೆ ದೇವರ ದರ್ಶನ ಮಾತ್ರವಲ್ಲ, ಇಡೀ ಜಾತ್ರಾ ಮೈದಾನವೇ ಒಂದು ದೊಡ್ಡ ಸಂತೆಯಾಗಿ ಮಾರ್ಪಟ್ಟಿತ್ತು.

ಸಿಹಿ, ಖಾರದ ಅಂಗಡಿಗೆ ಮುಗಿಬಿದ್ದ ಭಕ್ತರು:
ಜಾತ್ರಾ ಮೈದಾನದ ಸಿಹಿ ಅಂಗಡಿಯಲ್ಲಿ ಹಳದಿ ಮೈಸೂರು ಪಾಕ್, ಕಡ್ಲೆ ಪುರಿ, ಮಿಕ್ಸ್ಚರ್, ಕಡ್ಲೆಕಾಯಿ ಬೀಜ, ಖಾರದ ಸೇವುಗಳನ್ನು ರಾಶಿ ಹಾಕಿ ಮಾರಾಟ ಮಾಡಲಾಗುತ್ತಿತ್ತು. ಪಕ್ಕದಲ್ಲೇ ಕೆಂಪು ಜಿಲೇಬಿ ರಾಶಿ ಭಕ್ತರ ಬಾಯಲ್ಲಿ ನೀರೂರಿಸುತ್ತಿತ್ತು. ಅಂಗಡಿಯವರು ತೂಕ ಹಾಕಿ ಕೊಡುತ್ತಿದ್ದರೆ, ಭಕ್ತರು ಸಾಲುಗಟ್ಟಿ ಖರೀದಿಸುತ್ತಿದ್ದರು.
ಬಳೆ ಅಂಗಡಿಯಲ್ಲಿ ಹೆಣ್ಣು ಮಕ್ಕಳ ಸಂಭ್ರಮ:
ಹೆಣ್ಣು ಮಕ್ಕಳಿಗೆ ಜಾತ್ರೆ ಎಂದರೆ ಬಳೆ ಅಂಗಡಿಯೇ ಮೊದಲು. ಕಂಬಕ್ಕೆ ಸಾಲಾಗಿ ನೇತುಹಾಕಿದ್ದ ಬಣ್ಣ ಬಣ್ಣದ ಬಳೆಗಳು, ಡಬ್ಬಿಗಳಲ್ಲಿ ಇಟ್ಟಿದ್ದ ಡಿಸೈನ್ ಬಳೆಗಳನ್ನು ನೋಡಿ ಮಹಿಳೆಯರು ಖರೀದಿಯಲ್ಲಿ ತೊಡಗಿದ್ದರು. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಕೈಗೆ ಬಳೆ ಹಾಕಿ ನೋಡುತ್ತಿದ್ದ ದೃಶ್ಯ ಜಾತ್ರೆಯ ಸೊಬಗು ಹೆಚ್ಚಿಸಿತ್ತು.
ಆಟಿಕೆ ಅಂಗಡಿಯಲ್ಲಿ ಮಕ್ಕಳ ಕಲರವ:
ಬಣ್ಣ ಬಣ್ಣದ ಕಾರು, ಜೀಪ್, ಜೆಸಿಬಿ, ಟ್ರ್ಯಾಕ್ಟರ್, ಬಸ್, ಬೊಂಬೆ ಆಟಿಕೆಗಳನ್ನು ಅಂಗಡಿಯಲ್ಲಿ ಸಾಲಾಗಿ ಜೋಡಿಸಲಾಗಿತ್ತು. ತಂದೆ-ತಾಯಂದಿರು ಮಕ್ಕಳಿಗೆ ಇಷ್ಟವಾದ ಆಟಿಕೆ ತೆಗೆದುಕೊಂಡು ಕೊಡುತ್ತಿದ್ದರೆ, ಅಂಗಡಿಯವರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದರು.

ಬಿಸಿ ಬಿಸಿ ಜಿಲೇಬಿ:
ದೊಡ್ಡ ಕಪ್ಪು ಬಾಣಲೆಯಲ್ಲಿ ಎಣ್ಣೆಯಲ್ಲಿ ಕುದಿಯುತ್ತಿದ್ದ ಬಿಸಿ ಬಿಸಿ ಜಿಲೇಬಿಯನ್ನು ಮಹಿಳೆಯೊಬ್ಬರು ಚಿಮುಟದಿಂದ ತಿರುವಿ ಹಾಕುತ್ತಿದ್ದರು. ಪಕ್ಕದಲ್ಲಿ ತಟ್ಟೆಯಲ್ಲಿ ರಾಶಿ ಹಾಕಿದ್ದ ಜಿಲೇಬಿ ನೋಡಿದವರಿಗೆ ಬಾಯಲ್ಲಿ ನೀರು ಬರುವಂತಿತ್ತು. ಜಿಲೇಬಿ, ಬೋಂಡಾ, ಬಜ್ಜಿ, ವಡಾಪಾವ್, ಗೋಬಿ ಅಂಗಡಿಗಳಲ್ಲಿ ಭಕ್ತರ ದಂಡೇ ನೆರೆದಿತ್ತು.
ಚಾಟ್ಸ್ ಅಂಗಡಿಯಲ್ಲಿ ಗೋಬಿ, ವಡಾಪಾವ್ ಸವಿ:
ಮಾರುತಿ ಚಾಟ್ಸ್ ಅಂಗಡಿಯಲ್ಲಿ ಬಿಸಿ ಬಿಸಿ ಗೋಬಿ, ವಡಾಪಾವ್, ಕಬಾಬ್, ಬಜ್ಜಿ ತಯಾರಾಗುತ್ತಿತ್ತು. ಭಕ್ತರು ಚಾಟ್ಸ್ ಸವಿಯುತ್ತಾ, ಜಾತ್ರೆಯ ಸಂಭ್ರಮವನ್ನು ಅನುಭವಿಸುತ್ತಿದ್ದರು. ಒಬ್ಬರು ಕೈಯಲ್ಲಿ ವಡಾಪಾವ್ ಹಿಡಿದು ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದು ಜಾತ್ರೆಯ ಖುಷಿಯನ್ನು ತೋರಿಸುತ್ತಿತ್ತು.
ದೇವಸ್ಥಾನದ ಮುಂಭಾಗದಲ್ಲಿ ಜನಸಾಗರ:
ಸಿಡಿಲುಕಲ್ಲು ಶ್ರೀ ಲಕ್ಷ್ಮೀದೇವಿ ದೇವಾಲಯದ ಮುಂಭಾಗದಲ್ಲಿ ಸಾವಿರಾರು ಭಕ್ತಾಧಿಗಳು ಸಾಲುಗಟ್ಟಿ ನಿಂತಿದ್ದರು. ಕೆಂಪು, ನೀಲಿ ಟೆಂಟ್ ಅಂಗಡಿಗಳು, ಸುತ್ತಲೂ ಹಸಿರು ಮರಗಳು, ದೇವಸ್ಥಾನದ ಬಣ್ಣದ ಗೋಪುರ ಜಾತ್ರೆಗೆ ಮತ್ತಷ್ಟು ಶೋಭೆ ತಂದಿದ್ದವು.
ಹೆಣ್ಣು ಮಕ್ಕಳ ಕೈ ಉಯ್ಯಾಲೆ:
ಜಾತ್ರೆಯ ಮುಖ್ಯ ಆಕರ್ಷಣೆಯಾದ ಹೆಣ್ಣು ಮಕ್ಕಳ ಕೈ ಉಯ್ಯಾಲೆಯಲ್ಲಿ ಬಣ್ಣ ಬಣ್ಣದ ಸೀರೆ ಉಟ್ಟ ಮಹಿಳೆಯರು ಕೈ ಕೈ ಹಿಡಿದು ವೃತ್ತಾಕಾರದಲ್ಲಿ ಕುಣಿದು ಕುಪ್ಪಳಿಸಿದರು. ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತಾಧಿಗಳು ಚಪ್ಪಾಳೆ ತಟ್ಟಿ, ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಾ ಸಂಭ್ರಮಿಸಿದರು.
ಹೂವಿನ ಪಲ್ಲಕ್ಕಿ ಉತ್ಸವ:
ಮಲ್ಲಿಗೆ, ಸೇವಂತಿಗೆ, ಕೆಂಪು ಗುಲಾಬಿ ಹೂವುಗಳಿಂದ ಅಲಂಕೃತಗೊಂಡ ದೇವಿಯ ಅಡ್ಡ ಪಲ್ಲಕ್ಕಿಯನ್ನು ಯುವಕರು ಹೆಗಲ ಮೇಲೆ ಹೊತ್ತುಕೊಂಡು ಸಾಗಿದರು. ಚಲ್ಯ, ಕುಂಬೇನಹಳ್ಳಿ, ದಡಿಘಟ್ಟ ಗ್ರಾಮಗಳಲ್ಲಿ ಸಂಚರಿಸಿದ ಈ ಪಲ್ಲಕ್ಕಿ ಉತ್ಸವವು ಕೊನೆಯ ದಿನ ಸಿಡಿಲುಕಲ್ಲು ಜಾತ್ರಾ ಮೈದಾನದಲ್ಲಿ ಹೆಣ್ಣು ಮಕ್ಕಳ ಕೈ ಉಯ್ಯಾಲೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತವು ಸಡಗರ ಸಂಭ್ರಮದಿಂದ ನಡೆಯಿತು.
ಪುರಾಣ ಪ್ರಸಿದ್ಧ ಸಿಡಿಲುಕಲ್ಲು:
ಪಾಂಡವರು ತಮ್ಮ 14 ವರ್ಷ ವನವಾಸದ ಅವಧಿಯಲ್ಲಿ ಈ ಸಿಡಿಲುಕಲ್ಲುಗಳಿಂದ ಆಟವಾಡುತ್ತಿದ್ದರು ಎಂಬ ಪ್ರತೀತಿ ಇರುವ ಈ ಸ್ಥಳದಲ್ಲಿ ಭಕ್ತರು ಕಲ್ಲುಗಳ ಮೇಲೆ ಕುಳಿತು, ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಸಗಣಿ ಓಕಳಿಯಾಟ, ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ, ಕೋಲಾಟ, ವಿಶೇಷ ಪೂಜೆ, ಹೂವಿನ ಅಲಂಕಾರ, ದೇವರ ಮೆರವಣಿಗೆ, ಸಿಡಿಮದ್ದು ಪ್ರದರ್ಶನ, ಮನೆ ಮನೆ ದೀಪೋತ್ಸವ ಕಾರ್ಯಕ್ರಮ ಸೇರಿದಂತೆ ಜಾನಪದ ಶೈಲಿಯ ಹಲವು ಕಾರ್ಯಕ್ರಮಗಳು ನಡೆದವು.
ಜಾತ್ರಾ ಮಹೋತ್ಸವದಲ್ಲಿ ಸೇರಿದಂತೆ ದಡಿಘಟ್ಟ, ಚಲ್ಯ, ಕುಂಬೇನಹಳ್ಳಿ, ಜುಟ್ಟನಹಳ್ಳಿ, ಬ್ಯಾಡರಹಳ್ಳಿ, ಬೆಟ್ಟದಹಳ್ಳಿ, ಹಡೇನಹಳ್ಳಿ, ದೊಡ್ಡಕ್ಯಾತನಹಳ್ಳಿ, ಚಿಕ್ಕಕ್ಯಾತನಹಳ್ಳಿ, ಪೂಮಡಿಹಳ್ಳಿ, ಕಿಕ್ಕೇರಿ, ಲಕ್ಷ್ಮೀಪುರ, ಅಗ್ರಹಾರಬಾಚಹಳ್ಳಿ, ಕಾಡುಮೆಣಸ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.
ವಾಹನಗಳ ರಕ್ಷಾದೇವತೆ:
ದಡಿಘಟ್ಟ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿಯ ಮಹಿಮೆ ಅಪಾರವಾಗಿದೆ. ಹೊಸ ವಾಹನವನ್ನು ದಡಿಘಟ್ಟ ಕ್ಷೇತ್ರಕ್ಕೆ ಬಂದು ಶ್ರೀ ಲಕ್ಷ್ಮೀದೇವಿಗೆ ಪೂಜೆ ಸಲ್ಲಿಸಿದರೆ ವಾಹನ ಅಪಘಾತಕ್ಕೀಡಾಗುವುದಿಲ್ಲ ಎಂಬ ನಂಬಿಕೆ ಭಕ್ತಾಧಿಗಳಲ್ಲಿದೆ. ಇದರಿಂದಾಗಿ ಈ ಭಾಗದಲ್ಲಿ ಹೊಸದಾಗಿ ಖರೀದಿಸಿದ ವಾಹನವನ್ನು ಮೊದಲು ದಡಿಘಟ್ಟದ ಶ್ರೀ ಲಕ್ಷ್ಮೀದೇವಿ ಕ್ಷೇತ್ರಕ್ಕೆ ತಂದು ಪ್ರಥಮ ಪೂಜೆ ಸಲ್ಲಿಸುವುದು ಭಕ್ತರ ವಾಡಿಕೆಯಾಗಿದೆ.
– ಮಂಜುನಾಥ್ ಐ.ಕೆ.
