ಚನ್ನರಾಯಪಟ್ಟಣ: ಮನೆಯಲ್ಲೊಂದು ದೇವರ ಮನೆ ಇರುವಂತೆ ಜ್ಞಾನದ ಬೆಳಕಿಗಾಗಿ ಪ್ರತಿಯೊಂದು ಮನೆಯಲ್ಲೂ ಗ್ರಂಥಾಲಯ ಇರಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಅಭಿಲಾಷೆ ವ್ಯಕ್ತಪಡಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಅಂಗವಾಗಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಹಿರಿಯ ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾದಂಬರಿಕಾರರಾದ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಕೃತಿಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಪುಸ್ತಕಗಳು ಜ್ಞಾನದ ಪ್ರತಿರೂಪವಾಗಿದ್ದು, ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿದ ಅವರು, “ನಾವು ಸಂಪಾದಿಸುವ ಎರಡು ರೂಪಾಯಿ ಹಣದಲ್ಲಿ ಒಂದು ರೂಪಾಯಿಯನ್ನು ಆಹಾರಕ್ಕೆ, ಮತ್ತೊಂದು ರೂಪಾಯಿಯನ್ನು ಜ್ಞಾನದ ಬೆಳಕಿಗೆ ಕಾರಣವಾಗುವ ಪುಸ್ತಕಗಳ ಖರೀದಿಗೆ ಮೀಸಲಿಡಬೇಕು” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿದ್ದ ಎಸ್.ಎಲ್. ಶೇಷಗಿರಿರಾವ್ ಅವರಿಂದ ಆರಂಭವಾದ ಈ ಪರಂಪರೆಯಲ್ಲಿ ಇದುವರೆಗೆ ಹತ್ತು ಮಂದಿ ಅಧ್ಯಕ್ಷರು ಕಾರ್ಯನಿರ್ವಹಿಸಿದ್ದಾರೆ. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸುವ ಗುರಿಯೊಂದಿಗೆ ‘ಮನೆಗೊಂದು ಗ್ರಂಥಾಲಯ’ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಪುಸ್ತಕ ದಿನಾಚರಣೆ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ನಂಜನಗೂಡು ತಿರುಮಲಾಂಬ ಪ್ರಶಸ್ತಿ, ಹಾಮಾ ನಾಯಕ್ ಪ್ರಶಸ್ತಿ, ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ ಹಾಗೂ ಗಳಗನಾಥರ ಹೆಸರಿನಲ್ಲಿ ನಾಲ್ಕು ವಲಯಗಳಿಗೆ ನಾಲ್ಕು ವಾರ್ಷಿಕ ಪ್ರಶಸ್ತಿಗಳನ್ನು ನೀಡಲಿದೆ. ಮನೆಯಲ್ಲಿ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿರುವ ಓದುಗರಿಗೆ ತಲಾ ₹25,000 ನಗದು ಬಹುಮಾನ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಪ್ರಾಧ್ಯಾಪಕ ಡಾ. ಕುಶಾಲ್ ಬರಗೂರು ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿಯೂ ಪುಸ್ತಕಗಳ ಮಹತ್ವ ಮತ್ತು ಅವು ನೀಡುವ ಜ್ಞಾನಸಂಪತ್ತನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಹಾಸನ ಜಿಲ್ಲಾ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿಯ ಸದಸ್ಯ ಡಾ. ಬರಾಳು ಶಿವರಾಮ ಮಾತನಾಡಿ, ತಾಲ್ಲೂಕಿನಲ್ಲಿ 80ಕ್ಕೂ ಹೆಚ್ಚು ಸಾಹಿತಿಗಳು ಹಾಗೂ ಓದುಗರ ಮನೆಗಳಲ್ಲಿ ಉತ್ತಮ ಪುಸ್ತಕ ಸಂಗ್ರಹವಿರುವುದು ಸಮೀಕ್ಷೆಯಲ್ಲಿ ತಿಳಿದುಬಂದಿದ್ದು, ಶೀಘ್ರದಲ್ಲೇ ನೂರು ಮನೆಗಳ ಗುರಿ ತಲುಪಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಕಾದಂಬರಿಗಳ ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಹಳ್ಳಿ ವೆಂಕಟೇಶ್ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಹಾಸನ ಜಿಲ್ಲಾ ಸಮಿತಿ ಸಂಚಾಲಕ ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಶ್ರೀಮತಿ ಕಮಲಮ್ಮ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಹಾಗೂ ಅವರ ಪತ್ನಿಯನ್ನು ಡಾ. ಮಾನಸ ಅವರು ಶಾಲು ಹೊದಿಸಿ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.
