ಕೊಪ್ಪ (ಚಿಕ್ಕಮಗಳೂರು), ನ. 6: ಒಂದು ತಿಂಗಳಿನಿಂದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ನಗದು, ಚಿನ್ನ ಮತ್ತು ಬೆಳ್ಳಿ ಪತ್ತೆಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಬೆಳಕಿಗೆ ಬಂದಿದೆ.
ಆಗಸ್ಟ್ 21ರಂದು ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ನಲ್ಲಿ ಮಾಜಿ ಶಿಕ್ಷಣ ಸಚಿವ ದಿ. ಗೋವಿಂದೇಗೌಡರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಎಚ್.ಜಿ. ವೆಂಕಟೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಸಾಂಗ್ಲಿ ಪೊಲೀಸರ ನೆರವಿನಿಂದ ನೇಪಾಳಿ ಮೂಲದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್ ಮತ್ತು ಕರಂ ಸಿಂಗ್ ಬಹಾದ್ದೂರ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳು ಪರಾರಿಯಾಗಲು ಬಳಸಿದ್ದ ಕಾರನ್ನು ಪೊಲೀಸರು ಸೀಜ್ ಮಾಡಿ ಠಾಣೆ ಆವರಣದಲ್ಲಿ ನಿಲ್ಲಿಸಿದ್ದರು.
ಇತ್ತೀಚೆಗೆ ನ್ಯಾಯಾಲಯವು ಆ ಕಾರನ್ನು ಬಿಡುಗಡೆ ಮಾಡಲು ಆದೇಶ ನೀಡಿದ ಹಿನ್ನೆಲೆ, ಪೊಲೀಸರು ವಾಹನ ಪರಿಶೀಲನೆ ನಡೆಸಿದಾಗ ಅಚ್ಚರಿಯ ಪತ್ತೆ ನಡೆದಿದೆ.
ಕಾರಿನ ಸೀಟ್ ಅಡಿ ಲಕ್ಷಾಂತರ ಚಿನ್ನ–ಬೆಳ್ಳಿ!
ಪರಿಶೀಲನೆಯ ಸಮಯದಲ್ಲಿ ಕಾರಿನ ಸೀಟ್ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ ಮತ್ತು ₹3,41,150 ನಗದು ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ವಸ್ತುಗಳ ಮೌಲ್ಯ ಕೋಟಿಗೂ ಅಧಿಕವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಮೊತ್ತ ಮತ್ತು ಆಭರಣಗಳು ಮೊದಲ ಕಳ್ಳತನ ಪ್ರಕರಣದಲ್ಲಿ ಕಳೆದುಹೋದ ಪ್ರಮಾಣಕ್ಕಿಂತ ಹೆಚ್ಚು ಇದ್ದು, ಆರೋಪಿಗಳು ಇತರ ಪ್ರದೇಶಗಳಲ್ಲಿಯೂ ಕಳ್ಳತನಗಳಲ್ಲಿ ತೊಡಗಿರುವ ಸಾಧ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
