ಚನ್ನರಾಯಪಟ್ಟಣ: ಪುರಸಭಾ ವ್ಯಾಪ್ತಿಯ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ಸಣ್ಣ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿರುವ ಪುರಸಭಾ ಆಡಳಿತ ಮಂಡಳಿಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ, ರಸ್ತೆ ಬದಿ ವ್ಯಾಪಾರಿಗಳು ಗುರುವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದಂಡೋರ ಮಂಜುನಾಥ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವ್ಯಾಪಾರಿಗಳು “ನಮ್ಮ ಜೀವನೋಪಾಯವನ್ನು ಕಸಿದುಕೊಳ್ಳಬೇಡಿ”, “ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಒದಗಿಸಿ” ಎಂದು ಘೋಷಣೆ ಕೂಗಿದರು.
ಇದನ್ನು ಓದಿ : ಚನ್ನರಾಯಪಟ್ಟಣದ ಜನಪದ ಗಾಯಕ ಎಚ್.ಎಸ್. ಮಂಜುನಾಥ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೌರವ
ಪುರಸಭೆಯ ಅಧಿಕಾರಿಗಳು ಮುಂಜಾನೆ ನಗರದಲ್ಲಿನ ಹಲವೆಡೆ ರಸ್ತೆ ಬದಿ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಆಕ್ರೋಶಗೊಂಡರು. ವ್ಯಾಪಾರಿಗಳ ಪ್ರಕಾರ, ವರ್ಷಗಳಿಂದ ಪೂರ್ತಿ ಕುಟುಂಬದ ಬದುಕು ಈ ಸಣ್ಣ ವ್ಯಾಪಾರಗಳ ಮೇಲೆಯೇ ಅವಲಂಬಿತವಾಗಿದ್ದು, ಯಾವುದೇ ಪೂರ್ವ ಸೂಚನೆ ಇಲ್ಲದೆ ತೆರವು ಮಾಡಿರುವುದು ಅನ್ಯಾಯಕರವಾಗಿದೆ.
ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಹಾಗೂ ಪುರಸಭೆಯ ಅಧಿಕಾರಿಗಳು ಭೇಟಿ ನೀಡಿ ವ್ಯಾಪಾರಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ವ್ಯಾಪಾರಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಡುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
- ಮಂಜುನಾಥ್ ಐ .ಕೆ.

[…] […]