ಬೆಂಗಳೂರು, ಆಗಸ್ಟ್ 28: ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕದ ಗೃಹಕಚೇರಿ ಕೃಷ್ಣಾದಲ್ಲಿ ಸಹಕಾರ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಪ್ರಸ್ತುತ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ. 28,000 ಕೋಟಿ ವಿತರಣೆಯ ಗುರಿ ಹೊಂದಿದ್ದು, ಜುಲೈ ಅಂತ್ಯದವರೆಗೆ 8,69,284 ರೈತರಿಗೆ ರೂ.8,362.68 ಕೋಟಿ ಸಾಲ ವಿತರಿಸಲಾಗಿದೆ.
ಸಿಎಂ, ಪ್ರತಿ ಜಿಲ್ಲೆಗಳಲ್ಲಿ ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ಸಿಗುವುದನ್ನು ಖಾತ್ರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲದ ಮಿತಿಯನ್ನು ಶೇ.42.21ರಷ್ಟು ಕಡಿಮೆ ಮಾಡಿದ್ದರೂ ಶೇ.96.07 ಪ್ರಗತಿ ಸಾಧಿಸಲಾಗಿದೆ. 2024-25ನೇ ಸಾಲಿನಲ್ಲಿ 29,75,598 ರೈತರಿಗೆ 25,939.09 ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲಾಗಿದೆ.
ರಾಜ್ಯದಲ್ಲಿ 28,516 ಸಹಕಾರ ಸಂಘಗಳು ಲಾಭದಲ್ಲಿ, 14,670 ಸಂಘಗಳು ನಷ್ಟದಲ್ಲಿವೆ. 2,200 ಹಾಲು ಉತ್ಪಾದಕ ಸಂಘಗಳು ನಷ್ಟದಲ್ಲಿದ್ದು, ಹಾಲು ಉತ್ಪಾದನೆ ಹೆಚ್ಚಿಸಲು ಸಂಘ ಕಾರ್ಯದರ್ಶಿಗಳ ಜವಾಬ್ದಾರಿ ಹೆಚ್ಚಿಸಲಾಗಿದೆ.
ಸಹಕಾರ ಸಂಘಗಳ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಲ್ಲಿಸಬೇಕು ಮತ್ತು ನಿಬಂಧಕರ ಕಚೇರಿ ಕಾರ್ಯಗಳನ್ನು ಗಣಕೀಕರಿಸುವುದು ತ್ವರಿತಗೊಳಿಸಲು ಸೂಚನೆ ನೀಡಲಾಗಿದೆ. ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ 7,074 ಗಿರವಿದಾರ ಸಂಸ್ಥೆಗಳು ಮತ್ತು 1,468 ಚೀಟಿ ಸಂಸ್ಥೆಗಳ ಮೇಲೆ ನಿಗಾ ಇರಿಸಲು ಸಿಎಂ ನಿರ್ದೇಶಿಸಿದರು.
ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು.
