ಬೆಂಗಳೂರು, ಜು.20: ಭಾರತದಲ್ಲಿ ಮೊದಲ ಬಾರಿಗೆ ಡೆಂಗಿ ತಡೆಗಟ್ಟುವ ಲಸಿಕೆಗೆ ಕೇಂದ್ರ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದು, ಟಕೇಡಾ ಬಯೋಫಾರ್ಮಾಸೂಟಿಕಲ್ಸ್ ಇಂಡಿಯಾದ ‘ಕ್ಯುಡೆಂಗಾ’ (TAK-003) ಲಸಿಕೆ ಡೆಂಗಿ ನಿಯಂತ್ರಣದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
ಈ ಲಸಿಕೆಯನ್ನು 4 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದೊಳಗಿನ ವ್ಯಕ್ತಿಗಳಿಗೆ ನೀಡಬಹುದಾಗಿದೆ. ವಿಶೇಷವೆಂದರೆ, ಈ ಹಿಂದೆ ಡೆಂಗಿ ಸೋಂಕು ತಗುಲಿದ್ದರೂ ಅಥವಾ ತಗುಲಿರದಿದ್ದರೂ ಯಾವುದೇ ಪೂರ್ವ ಪರೀಕ್ಷೆ ನಡೆಸದೆ ಲಸಿಕೆ ನೀಡಬಹುದು.
ಟಕೇಡಾ ಕಂಪನಿಯ ಪ್ರಕಾರ, ಕ್ಯುಡೆಂಗಾ ನಾಲ್ಕೂ ಬಗೆಯ ಡೆಂಗಿ ವೈರಾಣುಗಳ ವಿರುದ್ಧ ರಕ್ಷಣೆ ಒದಗಿಸುವಂತೆ ರೂಪಿಸಲಾಗಿದೆ. ಜಾಗತಿಕ ಕ್ಲಿನಿಕಲ್ ಅಧ್ಯಯನಗಳಲ್ಲಿ ಡೆಂಗಿ ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಇದು ತೋರಿಸಿದೆ.
ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಡೆಂಗಿ ಪ್ರಕರಣಗಳು 11 ಪಟ್ಟು ಹೆಚ್ಚಾಗಿದ್ದು, 2025ರಲ್ಲಿ 1.13 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಲಸಿಕೆಗೆ ಅನುಮೋದನೆ ದೊರೆತಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.
ಈಗಾಗಲೇ 43 ದೇಶಗಳಲ್ಲಿ ಕ್ಯುಡೆಂಗಾಗೆ ಅನುಮೋದನೆ ದೊರೆತಿದ್ದು, ಸರ್ಕಾರಿ ಮತ್ತು ಖಾಸಗಿ ಯೋಜನೆಗಳ ಮೂಲಕ 32 ಮಿಲಿಯನ್ಗಿಂತ ಹೆಚ್ಚು ಡೋಸ್ಗಳು ವಿತರಣೆಗೊಂಡಿವೆ.
ಟಕೇಡಾ ಸಂಸ್ಥೆ, ಭಾರತದಲ್ಲಿ ನಿಯಂತ್ರಕ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಆರೋಗ್ಯ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಲಸಿಕೆಯನ್ನು ಹಂತ ಹಂತವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
