ಬೆಂಗಳೂರು, ಜೂನ್ 5: ರಾಯಲ್ ಚಾಲೆಂಜರ್ಸ್ ಬೆಂಗಳೂರ ತಂಡ ಐಪಿಎಲ್ (IPL) ಟ್ರೋಪಿ ಎತ್ತಿ ಹಿಡಿದ 18 ವರ್ಷಗಳ ಕಾಯುವಿಕೆಯ ನಂತರದ ಸಂಭ್ರಮ 18 ಗಂಟೆಯೂ ಇರಲಿಲ್ಲ. ಎರಡು ದಶಕದ ಬಳಿಕದ ಸಂಭ್ರಮಾಚರಣೆ ಎರಡು ದಿನವೂ ಇರಲಿಲ್ಲ. ಐಪಿಎಲ್ ಸಾಮ್ರಾಜ್ಯ ಗೆದ್ದು ಬಂದ ಕಲಿಗಳನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಸರ್ಕಾರದ ಪ್ರತಿನಿಧಿಗಳು ಹೂವಿನ ಹಾರಹಾಕುತ್ತಿದ್ದರೆ, ಅಲ್ಲಿಂದ ಕೂಗಳತೆ ದೂರದಲ್ಲೇ ಇರುವ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಕಾಲ್ತುಳಿತದಿಂದಾಗಿ (Bangalore Stampede) ಆರ್ಸಿಬಿ ಅಭಿಮಾನಿಗಳ ಮಾರಣಹೋಮವೇ ಆಗಿದೆ.
ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದ ಆರ್ಸಿಬಿ ತಂಡ ಬುಧವಾರ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿತ್ತು. ತಂಡದ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಸರ್ಕಾರದ ಸನ್ಮಾನ ಆದ ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಚಿನ್ನಸ್ವಾಮಿ ಸ್ಟೇಡಿಯಂಗೆ ಅಭಿಮಾನಿಗಳಿಗೆ ಉಚಿತ ಪ್ರವೇಶ ಇತ್ತು. ಹೀಗಾಗಿ ಬೆಳಗಿನಿಂದಲೇ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಹೀಗೆ ಬಂದವರು ಸ್ಟೇಡಿಯಂಗೆ ಪ್ರವೇಶಿಸುವಾಗ ನೂಕುನುಗ್ಗಲು ಆಗಿದ್ದು, 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿಯ ವಿವರ
- ಭೂಮಿಕ್, 20 ವರ್ಷ (ನೆಲಮಂಗಲ)
- ಸಹನ 19 ವರ್ಷ (ಕೋಲಾರ)
- ಪೂರ್ಣಚಂದ್, 32 ವರ್ಷ (ಮಂಡ್ಯ)
- ಚಿನ್ಮಯಿ, 19 ವರ್ಷ
- ದಿವ್ಯಾಂಶಿ, 13 ವರ್ಷ
- ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)
- ದೇವಿ, 29 ವರ್ಷ
- ಶಿವಲಿಂಗ್, 17 ವರ್ಷ
- ಮನೋಜ್, 33 ವರ್ಷ (ತುಮಕೂರು)
- ಅಕ್ಷತಾ, (ಮಂಗಳೂರು)
- ಹೆಸರು ಪತ್ತೆಯಾಗಿಲ್ಲ, 20 ವರ್ಷ ವೈದೇಹಿ ಆಸ್ಪತ್ರೆ
ಕಾಲ್ತುಳಿತ ಸಂಭವಿಸುತ್ತಿದ್ದಂತೆಯೇ ಗಾಯಾಳುಗಳನ್ನು ಅಕ್ಕಪಕ್ಕಪಕ್ಕದ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಅಭಿಮಾನಿಗಳ ಸಾಗರ ಎಷ್ಟಿತ್ತು ಅಂದರೆ, ಆ್ಯಂಬುಲೆನ್ಸ್ಗಳು ಹೋಗಲೂ ದಾರಿ ಇರಲಿಲ್ಲ. ಈ ನಡುವೆ ಹಲವರನ್ನು ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

