ಕೊರಟಗೆರೆ:- ಮುಂಗಾರು ಮಳೆಯ ಕೊರತೆಯಿಂದ ರಾಜ್ಯದ 28 ಜಿಲ್ಲೆಗಳು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಬರ ಪರಿಹಾರಕ್ಕಾಗಿ 10 ಸಾವಿರ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ತಾಲೂಕಿನ ಕೋಳಾಲ ಹಾಗೂ ಚನ್ನರಾಯನದುರ್ಗ ಹೋಬಳಿಯ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ರಾಗಿ, ಶೇಂಗಾ ಹಾಗೂ ಮುಸುಕಿನ ಜೋಳ ಬೆಳೆಗಳ ಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಲ್ಪತರು ಜಿಲ್ಲೆಯಲ್ಲಿ ಶೇಂಗಾ ಹಾಗೂ ಮುಸುಕಿನ ಜೋಳ ಬಿತ್ತನೆ ಅವಧಿ ಮುಗಿದಿದ್ದರೂ ಸಮರ್ಪಕ ಮಳೆಯಿಲ್ಲದ ಕಾರಣ ಬಿತ್ತಿದ ಬೆಳೆಗಳು ಮೊಳಕೆಯೊಡೆಯದೇ ಒಣಗಿವೆ. ರಾಗಿ ಬೆಳೆ ಸಹ ನೆಲಕಚ್ಚಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಿರಿಧಾನ್ಯಗಳ ಬಿತ್ತನೆಗೂ ಆಸಕ್ತಿ ಕುಂದಿದ್ದು, ಬೆಳೆ ವಿಮೆ ಕಂತು ಪಾವತಿಸಲು ಸಹ ರೈತರ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ತಕ್ಷಣ ಬರಗಾಲ ಘೋಷಿಸಿ ರೈತರಿಗೆ ಪರಿಹಾರ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಆದ್ಯತೆ ನೀಡಬೇಕು.
ಚುನಾವಣೆಯ ರಾಜಕೀಯವನ್ನು ನಂತರ ಮಾಡಬಹುದು; ಈಗ ರೈತರ ಬದುಕು ಉಳಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ಗೌಡ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ಕುಮಾರ್, ಬಿಜೆಪಿ ಮಧುಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಗೌಡ, ಜಿಲ್ಲಾ ಕಾರ್ಯದರ್ಶಿ ಡಾ. ಕೆ.ಎಲ್. ದರ್ಶನ್, ಮಂಡಲ ಅಧ್ಯಕ್ಷ ರುದ್ರೇಶ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಉಪಾಧ್ಯಕ್ಷ ಗೋವಿಂದರೆಡ್ಡಿ, ಯುವ ಘಟಕದ ಅಧ್ಯಕ್ಷ ದಾಸರಹಳ್ಳಿ ಚೇತನ್, ಮಹಿಳಾ ಘಟಕದ ಅಧ್ಯಕ್ಷೆ ಕಾತ್ಯಾಯಿನಿ, ಕಾರ್ಯದರ್ಶಿ ರೂಪಶ್ರೀ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿ ಪರಿಶೀಲನೆ
ವಿಜಯೇಂದ್ರ ಅವರು ತುಮಕೂರು ಗ್ರಾಮಾಂತರ ತಾಲೂಕಿನ ದುರ್ಗದಹಳ್ಳಿ, ವಡ್ಡರಹಳ್ಳಿ ಹಾಗೂ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿ, ತಣ್ಣೇನಹಳ್ಳಿ, ಜೋನಿಗರಹಳ್ಳಿ, ತೋವಿನಕೆರೆ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ರಾಗಿ, ಶೇಂಗಾ ಮತ್ತು ಮುಸುಕಿನ ಜೋಳ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ರೈತರೊಂದಿಗೆ ಸಮಾಲೋಚನೆ ನಡೆಸಿ ಬೆಳೆ ಹಾನಿ, ನೀರಿನ ಕೊರತೆ ಹಾಗೂ ಪರಿಹಾರದ ಕುರಿತು ಮಾಹಿತಿ ಪಡೆದುಕೊಂಡರು.

ರೈತರ ಮನವಿ..
ಸ್ಥಳೀಯ ರೈತರು, ಸುಮಾರು ಹತ್ತು ವರ್ಷಗಳ ಬಳಿಕ ಇಂತಹ ತೀವ್ರ ಮುಂಗಾರು ವೈಫಲ್ಯ ಎದುರಾಗಿದೆ. ಬಿತ್ತನೆ ಬೀಜಗಳು ಮನೆಗಳಲ್ಲೇ ಉಳಿದಿದ್ದು, ಬಿತ್ತಿದ ಬೆಳೆಗಳೂ ಮೊಳಕೆಯೊಡೆಯದೆ ನಾಶವಾಗಿವೆ. ಪ್ರತಿ ಎಕರೆಗೆ ಸುಮಾರು ₹40 ಸಾವಿರ ನಷ್ಟ ಉಂಟಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ನೆರವಿಗೆ ಬರಬೇಕು ಎಂದು ವಿಜಯೇಂದ್ರ ಅವರಿಗೆ ಮನವಿ ಮಾಡಿದರು.

ಮೃತ ಮುಖಂಡರ ಮನೆಗೆ ಭೇಟಿ..
ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಬಿಜೆಪಿ ಮಂಡಲ ಉಪಾಧ್ಯಕ್ಷ ಹಾಗೂ ಎಲೆರಾಂಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಮೇಶ್ಚಂದ್ರ ಅವರ ನಿವಾಸಕ್ಕೆ ವಿಜಯೇಂದ್ರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ನಾನು ಎರಡು ಬಾರಿ ಉಳುಮೆ ಮಾಡಿ, ಎರಡು ಬಾರಿ ಬಿತ್ತನೆ ಮಾಡಿದ್ದೇನೆ. ಆದರೆ ಕನಿಷ್ಠ ಮೊಳಕೆಯೂ ಬಂದಿಲ್ಲ. ಪ್ರತಿ ಎಕರೆಗೆ ಸುಮಾರು ₹40 ಸಾವಿರ ನಷ್ಟವಾಗಿದೆ. ಸರ್ಕಾರ ಬರಗಾಲ ಘೋಷಿಸಿ ರೈತರಿಗೆ ಪರಿಹಾರ, ಜಾನುವಾರುಗಳಿಗೆ ಮೇವು ಹಾಗೂ ಸಾಲ ಮನ್ನಾ ಮಾಡಬೇಕು.
– ಗೋವಿಂದರೆಡ್ಡಿ, ರೈತ, ತಣ್ಣೇನಹಳ್ಳಿ..

ಬಿಜೆಪಿಯ ಏಳು ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿವೆ. ಕಲ್ಪತರು ಜಿಲ್ಲೆಯಲ್ಲಿ ಅಭೂತಪೂರ್ವ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ವಿಮೆ ಕಂತಿಗೆ ರಾಜ್ಯ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹50 ಲಕ್ಷ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಹಾಗೂ ಜಾನುವಾರು ಮೇವು ಪೂರೈಕೆಗೆ ಆದ್ಯತೆ ನೀಡಬೇಕು.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
– ಶ್ರೀನಿವಾಸ್ ಕೊರಟಗೆರೆ
