ಕೊರಟಗೆರೆ:- ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ತಮ್ಮ ಹೆಸರು, ವಿವರಗಳು ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಪರಿಷ್ಕರಣೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಲಪ್ಪ ಪ್ರತಿಷ್ಠಾನದ ವತಿಯಿಂದ ಸೋಮವಾರ ಕೊರಟಗೆರೆ ಪಟ್ಟಣದ ಸಂತೆ ಮೈದಾನದ ಸಮೀಪದ ಶಿವಗಂಗಾ ಚಿತ್ರಮಂದಿರದ ಮುಂಭಾಗ ಎಸ್ಐಆರ್ ಸಹಾಯ ಡೆಸ್ಕ್ ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿ ಹಾಗೂ ತಾಂತ್ರಿಕ ನೆರವು ಒದಗಿಸಲಾಯಿತು.
ಸಹಾಯ ಡೆಸ್ಕ್ನಲ್ಲಿ ಮತದಾರರ ಪಟ್ಟಿಯಲ್ಲಿನ ಮತಗಟ್ಟೆ ಸಂಖ್ಯೆ, ಭಾಗ ಸಂಖ್ಯೆ, ಮತದಾರರ ವಿವರಗಳು, ಅಗತ್ಯ ದಾಖಲೆಗಳ ಮಾಹಿತಿ ಸೇರಿದಂತೆ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು. ಅರ್ಜಿ ಭರ್ತಿ ಮಾಡುವ ವಿಧಾನ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಸಂಬಂಧಿತ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ವಿವರಗಳನ್ನು ತಿಳಿಸಿ ಮತದಾರರಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಯಿತು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ 300ಕ್ಕೂ ಅಧಿಕ ಮತದಾರರು ಸಹಾಯ ಡೆಸ್ಕ್ನ ಸೇವೆಯನ್ನು ಪಡೆದುಕೊಂಡರು. ದಾಖಲೆಗಳ ಪರಿಶೀಲನೆ, ಅರ್ಜಿ ನಮೂನೆಗಳ ವಿತರಣೆ, ಅರ್ಜಿ ಭರ್ತಿಗೆ ಮಾರ್ಗದರ್ಶನ, ಬಿಎಲ್ಒಗಳ ಮಾಹಿತಿ ಸೇರಿದಂತೆ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ನೆರವು ಒದಗಿಸಲಾಯಿತು. ಸಾರ್ವಜನಿಕರು ತಮ್ಮ ಮತದಾರರ ಮಾಹಿತಿಯನ್ನು ಪರಿಶೀಲಿಸಿಕೊಂಡು ಅಗತ್ಯ ಕ್ರಮಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ
ಮಾತನಾಡಿದ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ ನಾರಾಯಣ್, ಶ್ರೀ ಗ್ರಾಮಾಂತರ ಅಧ್ಯಕ್ಷ ಅರಕೆರೆ ಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಅವರು, ಮತದಾರರು ಎಸ್ಐಆರ್ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಹೆಸರು ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಅಗತ್ಯ ಪರಿಷ್ಕರಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಹಾಯ ಡೆಸ್ಕ್ನಲ್ಲಿ ಕೋಳಾಲ ಹರೀಶ್ ಗೌಡ, ನಾರಾಯಣ, ಉಮೇಶ್, ದಿಲೀಪ್, ಅಶ್ವತ್, ಕಾಂತರಾಜು ಹಾಗೂ ಕೃಷ್ಣಮೂರ್ತಿ ಸಾರ್ವಜನಿಕರಿಗೆ ಮಾಹಿತಿ ಮತ್ತು ಸೇವೆ ಒದಗಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಎಲ್ಐಸಿ ರಾಜಣ್ಣ, ಗಟ್ಲಹಳ್ಳಿ ಕುಮಾರ್, ವಿನಯ್, ಮಹೇಶ್, ಗೋಪಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಗುಂಡಿ ನಪಾಳ್ಯ ಜಯಮ್ಮ, ಲಕ್ಷ್ಮಮ್ಮ, ಮಂಜಮ್ಮ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ
