ಚನ್ನರಾಯಪಟ್ಟಣ: ಶ್ರವಣಬೆಳಗೊಳ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಗಳನ್ನು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ ಸೇರ್ಪಡೆಗೊಳಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ತಲಾ ₹100 ಕೋಟಿ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದ ಅಂಬಿಕಾ ವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ ಎರಡು ಬೆಟ್ಟಗಳ ನಡುವೆ ರೋಪ್ವೇ ನಿರ್ಮಿಸುವ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಶ್ರವಣಬೆಳಗೊಳವನ್ನು ವಿಶ್ವಪಾರಂಪರಿಕ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಬೇಕು. ಮುಂಬರುವ ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ಆರಂಭಿಸಿ, ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ರೈಲುಗಳನ್ನು ಓಡಿಸಬೇಕು ಹಾಗೂ ಈ ಭಾಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಶಿಕ್ಷಣದ ಮಹತ್ವವನ್ನು ಸಾರಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕ್ಷೇತ್ರದ ಧಾರ್ಮಿಕ ಮಹತ್ವವನ್ನು ಸ್ಮರಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಎಚ್.ಟಿ.ಮಂಜು, ಸ್ವರೂಪ್ ಪ್ರಕಾಶ್, ಕಟ್ಟಡದ ದಾನಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
