ಹಾಸನ (ಕಿರಿಸಾವೆ), ಆ.5: ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಬರಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ, ರೈತರ ಸಮಸ್ಯೆಗಳು, ಕಾಡಾನೆ ಹಾವಳಿ, ಸಚಿವ ಸಂಪುಟ ಅಸಮಾಧಾನ ಹಾಗೂ ಜಿಲ್ಲೆಯ ಅಭಿವೃದ್ಧಿ ಕುರಿತು ಮಹತ್ವದ ಹೇಳಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರದ ಛಾಯೆ ಆವರಿಸಿದ್ದು, ರೈತರ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಮೊದಲ ಆದ್ಯತೆಯಾಗಿ ಬರ ಪರಿಸ್ಥಿತಿಯ ಅಧ್ಯಯನ ನಡೆಸುತ್ತಿದೆ ಎಂದು ಹೇಳಿದರು.
“ಬರ ಅಧ್ಯಯನಕ್ಕೆ ಬಂದಾಗ ಹಾರ-ತುರಾಯಿ ಹಾಕಿಸಿಕೊಳ್ಳುವುದು ನನಗೆ ಇಷ್ಟವಿಲ್ಲ. ಆದರೆ ಕಾರ್ಯಕರ್ತರು ಪ್ರೀತಿಯಿಂದ ಹಾಕಿದ್ದಾರೆ. ಈಗ ನಮ್ಮ ಮೊದಲ ಆದ್ಯತೆ ರೈತರ ಸಮಸ್ಯೆಗಳನ್ನು ಬಗೆಹರಿಸುವುದಾಗಿದೆ” ಎಂದು ತಿಳಿಸಿದರು.
ಎನ್ಡಿಆರ್ಎಫ್ ನೆರವಿಗೆ ಸಮೀಕ್ಷೆ
ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಮುಖ್ಯಮಂತ್ರಿ ಬರಪರಿಸ್ಥಿತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆ ವಿಮೆ ಪರಿಹಾರ ವಿಳಂಬದಿಂದ ರೈತರು ಸಂಕಷ್ಟದಲ್ಲಿದ್ದು, ಆಗಸ್ಟ್ 13ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾವ ಖಾತೆಯೂ ಕೇಳಿಲ್ಲ
ಹಾಸನ ಜಿಲ್ಲೆಗೆ ಹೊಸ ನಾಯಕತ್ವ ನೀಡಿದ ಕಾಂಗ್ರೆಸ್ ಹೈಕಮಾಂಡ್ಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನೀಡಿದ ಭರವಸೆಯನ್ನು ಉಳಿಸಿಕೊಂಡಿದ್ದಾರೆ ಎಂದರು.
“ನಾನು ಯಾವುದೇ ನಿರ್ದಿಷ್ಟ ಖಾತೆಗೆ ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಅದು ಮುಖ್ಯಮಂತ್ರಿಗಳ ಪರಮಾಧಿಕಾರ” ಎಂದು ಸ್ಪಷ್ಟಪಡಿಸಿದರು.

ಅಸಮಾಧಾನ ಸಹಜ
ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಸಿಗದ ಶಾಸಕರ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ರಚನೆಯಾಗುವಾಗ ಆಕಾಂಕ್ಷಿಗಳಲ್ಲಿ ಅಸಮಾಧಾನ ಉಂಟಾಗುವುದು ಸಹಜ. ಆದರೆ ಅದನ್ನು ನಿಭಾಯಿಸುವ ಶಕ್ತಿ ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ಗೆ ಇದೆ ಎಂದು ಹೇಳಿದರು.
ಕಾಡಾನೆ ಸಮಸ್ಯೆಗೆ ಕ್ರಿಯಾಯೋಜನೆ
ಹಾಸನ ಜಿಲ್ಲೆಯ ಬಹುಕಾಲದ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಮಗ್ರ ಕ್ರಿಯಾಯೋಜನೆ ರೂಪಿಸಲಾಗುವುದು. ಯಾವುದೇ ರೈತ ಕಾಡಾನೆ ದಾಳಿಗೆ ತುತ್ತಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪಕ್ಷಭೇದ ಮರೆತು ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ಗೈರು ಕುರಿತು ಸ್ಪಷ್ಟನೆ
ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿದ್ದ ಕುರಿತು ಪ್ರತಿಕ್ರಿಯಿಸಿದ ಸಚಿವರು, ವೈಯಕ್ತಿಕ ಕಾರಣ ಹಾಗೂ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದು, ಸಮಾರಂಭವನ್ನು ದೂರದರ್ಶನದ ಮೂಲಕ ವೀಕ್ಷಿಸಿರುವುದಾಗಿ ಹೇಳಿದ್ದಾರೆ ಎಂದರು.
ಬಿಜೆಪಿ ಅಧ್ಯಯನ ಅವರ ಕರ್ತವ್ಯ
ಬಿಜೆಪಿ ನಾಯಕರು ನಡೆಸಿದ ಬರ ಅಧ್ಯಯನ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ರಾಷ್ಟ್ರೀಯ ಪಕ್ಷವಾಗಿ ತಮ್ಮ ಕರ್ತವ್ಯ ಮಾಡಿದ್ದಾರೆ. ನಾವು ಈಗ ಆಡಳಿತದಲ್ಲಿದ್ದೇವೆ. ರೈತರ ಪರವಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ನಾವೂ ಬರ ಅಧ್ಯಯನ ನಡೆಸುತ್ತಿದ್ದೇವೆ” ಎಂದು ಹೇಳಿದರು.
