ಕೊರಟಗೆರೆ:- ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಕಾರ್ಯಕ್ರಮವು ಭಕ್ತಿಭಾವ ಹಾಗೂ ಸಡಗರದಿಂದ ನಡೆಯಿತು.
ಗ್ರಾಮದ ಚಿಕ್ಕನಲ್ಲರಂಗಪ್ಪನವರ ಮನೆ ಹತ್ತಿರದ ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಯುವಕರು, ಮಕ್ಕಳು ಹಾಗೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡು ವಿಘ್ನೇಶ್ವರನಿಗೆ ಭಕ್ತಿಭಾವದಿಂದ ಬೀಳ್ಕೊಡುಗೆ ನೀಡಿದರು.
ಮೆರವಣಿಗೆಯುದ್ದಕ್ಕೂ ಗಣೇಶನ ನಾಮಸ್ಮರಣೆ ಹಾಗೂ ಘೋಷಣೆಗಳು ಮೊಳಗಿದವು. ಗ್ರಾಮಸ್ಥರು ಪೂಜೆ ಸಲ್ಲಿಸಿ, ಭಕ್ತಿಭಾವದಿಂದ ಗಣೇಶನನ್ನು ಬೀಳ್ಕೊಟ್ಟರು. ಈ ವೇಳೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸರಳವಾಗಿ ನಡೆದ ವಿಸರ್ಜನಾ ಕಾರ್ಯಕ್ರಮವು ಶಾಂತಿಯುತವಾಗಿ ನೆರವೇರಿತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು.
– ಶ್ರೀನಿವಾಸ್ ಕೊರಟಗೆರೆ.
