ಬೆಂಗಳೂರು: 2011ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ್ದ 362 ಗೆಜೆಟೆಡ್ ಪ್ರೊಬೇಷನರ್ಗಳ ನೇಮಕಾತಿಯನ್ನು ಸಿಂಧುಗೊಳಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ 2022ರ ಕಾಯ್ದೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸ್ಪಷ್ಟಪಡಿಸಿದೆ. ಹೀಗಾಗಿ, ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ಸರ್ಕಾರ ತನ್ನ ಸ್ವಂತ ಅಧಿಕಾರ ಬಳಸಿ ಹುದ್ದೆಗಳಲ್ಲಿ ಮುಂದುವರಿಸಲು ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
362 ಅಭ್ಯರ್ಥಿಗಳ ನೇಮಕಾತಿಯನ್ನು ಸಿಂಧುಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯ್ದೆ–2022 ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 29ರಂದು ತೀರ್ಪು ನೀಡಿತ್ತು. ಈ ತೀರ್ಪಿನಿಂದಾಗಿ 2011ರ ನೇಮಕಾತಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆಗೆ ಅವಕಾಶವಿದೆಯೇ ಎಂಬ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಿಂದ ಕಾನೂನು ಅಭಿಪ್ರಾಯ ಕೇಳಿತ್ತು. ಇದಕ್ಕೆ ನಾಲ್ಕು ಪುಟಗಳ ವಿವರವಾದ ಅಭಿಪ್ರಾಯ ನೀಡಿರುವ ಇಲಾಖೆ, ನ್ಯಾಯಾಲಯದ ನಿರ್ದೇಶನಗಳ ಮಿತಿಯಲ್ಲಿಯೇ ಸರ್ಕಾರ ಮುಂದುವರಿಯಬೇಕು ಎಂದು ಸಲಹೆ ನೀಡಿದೆ.
ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಶಿಫಾರಸು
ಸುಪ್ರೀಂ ಕೋರ್ಟ್ ತೀರ್ಪಿನ ಪ್ಯಾರಾ 19ರಲ್ಲಿ ನೀಡಿರುವ ನಿರ್ದೇಶನದಂತೆ, ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಖಾಲಿ ಇರುವ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ಒಂದು ಬಾರಿಗೆ ವಯೋಮಿತಿ ಸಡಿಲಿಕೆ ನೀಡಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಇಲಾಖೆ ತಿಳಿಸಿದೆ.
ಆದರೆ, ಈ ಪ್ರಕ್ರಿಯೆಯನ್ನು ಕೇವಲ 2011ರ ಸಾಲಿನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಎಲ್ಲ ಅರ್ಹ ಅಭ್ಯರ್ಥಿಗಳಿಗೂ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು. ಈ ಅಭ್ಯರ್ಥಿಗಳಿಗೆ ಮಾತ್ರ ಅನುಕೂಲವಾಗುವಂತೆ ಪ್ರತ್ಯೇಕ ನಿಯಮ ರೂಪಿಸುವ ಪ್ರಯತ್ನ ಮಾಡಬಾರದು ಎಂದು ಸ್ಪಷ್ಟಪಡಿಸಿದೆ.
30 ದಿನಗಳ ಒಳಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ವಿಚಾರ
ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ನಿರ್ದೇಶನಗಳ ಅನುಷ್ಠಾನದ ಕುರಿತು ಯಾವುದೇ ಸಂದೇಹಗಳಿದ್ದರೆ, ಸ್ಪಷ್ಟೀಕರಣ ಕೋರಿ ತಕ್ಷಣವೇ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಇಲಾಖೆ ಸಲಹೆ ನೀಡಿದೆ.
ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮೊದಲು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ ತೀರ್ಪು ಪ್ರಕಟವಾದ 30 ದಿನಗಳ ಒಳಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕಿರುವುದನ್ನೂ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಈಗಾಗಲೇ ಹುದ್ದೆಯಲ್ಲಿರುವ ಅಭ್ಯರ್ಥಿಗಳ ಹಿರಿತನ ಮತ್ತು ಕಾಯಮಾತಿ ವಿಚಾರಗಳನ್ನು ಮುಂದಿಟ್ಟು ನೇಮಕಾತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ತಾತ್ಕಾಲಿಕ ಅಥವಾ ಮಧ್ಯಂತರ ಪರಿಹಾರ ಬೇಕಿದ್ದರೆ ಅದನ್ನು ನ್ಯಾಯಾಲಯದ ಮೂಲಕವೇ ಪಡೆಯಬೇಕು. ರಾಜ್ಯ ಸರ್ಕಾರ ಅಥವಾ ಬಾಧಿತ ಅಭ್ಯರ್ಥಿಗಳು ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.
ಮಾನವೀಯ ಕಾಳಜಿಗಿಂತ ಕಾನೂನಿನ ನಿಯಮ ಮುಖ್ಯ
2011ರ ನೇಮಕಾತಿ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಕೆಪಿಎಸ್ಸಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಹಾಗೂ ಮಧ್ಯವರ್ತಿಗಳನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಯಾವುದೇ ಅಭ್ಯರ್ಥಿಗಳನ್ನು ಆರೋಪಿಗಳೆಂದು ಹೆಸರಿಸಿರಲಿಲ್ಲ. ಅಧಿಕಾರಿಗಳ ದುಷ್ಕೃತ್ಯಕ್ಕೆ ಅಭ್ಯರ್ಥಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅನ್ಯಾಯ ಎಂಬ ವಾದವನ್ನು 2022ರ ಕಾಯ್ದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯಲ್ಲಿ ಸರ್ಕಾರ ಮುಂದಿಟ್ಟಿತ್ತು.
ಆದರೆ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಅಂಶಗಳನ್ನು ಉಲ್ಲೇಖಿಸಿ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದೆ. ಕಳಂಕಿತರಲ್ಲದ ಅಭ್ಯರ್ಥಿಗಳನ್ನು ರಕ್ಷಿಸಬೇಕು ಎಂಬ ವಾದವನ್ನೂ ನ್ಯಾಯಾಲಯ ಒಪ್ಪಿಲ್ಲ ಎಂದು ಇಲಾಖೆ ತನ್ನ ಅಭಿಪ್ರಾಯದಲ್ಲಿ ವಿವರಿಸಿದೆ.
ಹೀಗಾಗಿ, ಅಭ್ಯರ್ಥಿಗಳ ಸಂಕಷ್ಟವನ್ನು ಪರಿಗಣಿಸುವಾಗಲೂ ನ್ಯಾಯಾಂಗದ ಅಂತಿಮ ತೀರ್ಪಿನ ಮಿತಿಗಳನ್ನು ಮೀರಲು ಸಾಧ್ಯವಿಲ್ಲ. 2022ರ ಕಾಯ್ದೆಯ ಸಿಂಧುತ್ವವನ್ನು ಮಾನವೀಯ ನೆಲೆಯಲ್ಲಿ ಸಮರ್ಥಿಸಿಕೊಳ್ಳಲು ಕೂಡ ಅವಕಾಶವಿಲ್ಲ. ನ್ಯಾಯಾಲಯ ಸೂಚಿಸಿರುವ ಹೊಸ ನೇಮಕಾತಿ ಪ್ರಕ್ರಿಯೆಯೇ ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಲಭ್ಯವಿರುವ ಕಾನೂನುಬದ್ಧ ಮಾರ್ಗ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.
2013ರ ಕಾಯ್ದೆ ಮತ್ತು 2022ರ ಕಾಯ್ದೆ ನಡುವಿನ ವ್ಯತ್ಯಾಸ
550 ಸಹಾಯಕ ಎಂಜಿನಿಯರ್ಗಳ ನೇರ ನೇಮಕಾತಿಗಾಗಿ ರಾಜ್ಯ ಸರ್ಕಾರ 2013ರಲ್ಲಿ ಕರ್ನಾಟಕ ನಾಗರಿಕ ಸೇವೆಗಳು (ಜಲ ಸಂಪನ್ಮೂಲ ಸೇವೆ) (ಸಹಾಯಕ ಎಂಜಿನಿಯರ್ಗಳು ಮತ್ತು ಜೂನಿಯರ್ ಎಂಜಿನಿಯರ್ಗಳ ವಿಶೇಷ ನೇಮಕಾತಿ) ಕಾಯ್ದೆಯನ್ನು ಜಾರಿಗೆ ತಂದಿತ್ತು.
ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಎಂಜಿನಿಯರ್ಗಳ ಸುದೀರ್ಘ ಸೇವೆಯನ್ನು ಕಾಯಂಗೊಳಿಸುವ ಉದ್ದೇಶದಿಂದ ಈ ಕಾಯ್ದೆ ರೂಪಿಸಲಾಗಿತ್ತು. ಇಲಾಖೆಯ ಅಗತ್ಯತೆ ಮತ್ತು ಸೇವಾ ವಿಚಾರಗಳನ್ನು ಆಧರಿಸಿ ಕಾಯ್ದೆ ಜಾರಿಗೊಳಿಸಲಾಗಿತ್ತು. ಆಯ್ಕೆ ಪ್ರಕ್ರಿಯೆಗೂ ಮುನ್ನ ಯಾವುದೇ ಕಳಂಕ ಇರಲಿಲ್ಲ.
ಆದರೆ, 2022ರ ಕಾಯ್ದೆಯನ್ನು ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗಳಿಂದ ರದ್ದುಗೊಂಡಿದ್ದ ಆಯ್ಕೆ ಪಟ್ಟಿಯನ್ನು ಮತ್ತೆ ಸಿಂಧುಗೊಳಿಸುವ ಉದ್ದೇಶದಿಂದ ತರಲಾಗಿತ್ತು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿದ್ದ ಈ ಎರಡು ಕಾಯ್ದೆಗಳ ನಡುವೆ ಮೂಲಭೂತ ವ್ಯತ್ಯಾಸವಿದೆ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ತನ್ನ ಅಭಿಪ್ರಾಯದಲ್ಲಿ ಉಲ್ಲೇಖಿಸಿದೆ.
ಮುಂದಿನ ದಾರಿ ಏನು?
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಿದರೆ, ಅದನ್ನು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ವಿನೋದ್ ಚಂದ್ರನ್ ಅವರ ಪೀಠವೇ ಪರಿಶೀಲಿಸಲಿದೆ. ಸಾಮಾನ್ಯವಾಗಿ ಮರುಪರಿಶೀಲನಾ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ನಡೆಯುತ್ತದೆ.
ಒಂದು ವೇಳೆ ಮರುಪರಿಶೀಲನಾ ಅರ್ಜಿ ವಜಾಗೊಂಡರೆ, ಮುಂದಿನ ಕಾನೂನು ಪರಿಹಾರವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕ್ಯುರೇಟಿವ್ ಅರ್ಜಿಯನ್ನು ಪುರಸ್ಕರಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಒಟ್ಟಿನಲ್ಲಿ, 362 ಅಭ್ಯರ್ಥಿಗಳ ನೇಮಕಾತಿಯನ್ನು ಹಳೆಯ ಕಾಯ್ದೆಯ ಮೂಲಕ ಉಳಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು, ಮುಂದಿನ ನಿರ್ಧಾರಗಳು ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ಕಾನೂನು ಪ್ರಕ್ರಿಯೆಗಳ ಮೇಲೆಯೇ ಅವಲಂಬಿತವಾಗಿವೆ. 2011ರಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಭವಿಷ್ಯ ಈಗ ನ್ಯಾಯಾಂಗದ ಮುಂದಿನ ಕ್ರಮ ಹಾಗೂ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ.
