ಮೊಲಕ್ಕೆ ಬಲೆ ಹಾಕಿದ್ದ ದೇವಪ್ಪ, ತನ್ನ ಬಳಿಯಿದ್ದ ಗೋಣಿಚೀಲದೊಳಗೆ ಈಗಾಗಲೇ ಹಿಡಿದಿದ್ದ ಮೊಲವೊಂದನ್ನು ಅದರ ಹಿಂಗಾಲುಗಳನ್ನು ಹಿಡಿದು ಮೇಲಕ್ಕೆತ್ತಿ ತೋರಿಸಿದ. ಬೆಳಿಗ್ಗೆ ಮತ್ತು ಸಂಜೆ ಹೀಗೆ ದಿನಕ್ಕೆರಡು ಬಾರಿ ಬಲೆಯಲ್ಲಿ ಬಿದ್ದಿರಬಹುದಾದ ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಬರುತ್ತಿದ್ದ ದೇವಪ್ಪ, ನನಗೆ ರೈಲ್ವೆ ಹಾದಿಗೆ ಹೋಗುವ ದಾರಿಯನ್ನು ತೋರಿಸಿದ. ಆ ಈಚಲಹರದಲ್ಲಿ ಹಾವಿನಂತೆ ಗುತ್ತಿಗುತ್ತಿಗಳನ್ನು ಸುತ್ತಿಕೊಂಡು ಹೋಗುತ್ತಿದ್ದ ದಾರಿಯನ್ನು ತೋರಿಸುತ್ತಾ, “ದಾರಿ ನೋಡಿಕೊಂಡು ಹೋಗಿ; ಅಲ್ಲಲ್ಲಿ ಬಲೆಗಳಿರ್ತವೆ” ಎಂದ.
ಈಚಲಹರದಲ್ಲಿ ಮಾರ್ಗದರ್ಶಕನಾಗಿ ನನಗೆ ಸಿಕ್ಕಿದ್ದ ದೇವಪ್ಪನ ಹತ್ತಿರ, ಹೆದ್ದಾರಿಯ ಪಕ್ಕದಲ್ಲಿದ್ದ ತಗಡಿನ ಬಾಗಿಲಿನ ಶೆಡ್ಡಿನ ಮನೆಯ ಮಲೆಯಾಳಿಯ ವಿಚಾರ ಪ್ರಸ್ತಾಪಿಸಿ, “ಅಲ್ಲಾರೀ, ದೇವಪ್ಪಾ; ಹಿಂದೆ-ಮುಂದೆ ನಿರಂತರ ಕಾಡಿರುವಲ್ಲಿ ಆ ಮನುಷ್ಯ ಇಬ್ಬರು ಹೆಂಗಸರನ್ನಿಟ್ಟುಕೊಂಡು ಏನು ಮಾಡ್ತಾ ಇದ್ದಾನೆ?” ಎಂದೆ.
“ಓ, ಕುಂಯಿಮೋಣುವಿನ ವಿಚಾರಾನಾ? ಅವನೇನೂ ಇಲ್ಲಿಗೆ ಹಳಬನಲ್ಲ. ನಾಲ್ಕು ವರ್ಷ ಆಯಿತಷ್ಟೇ ಇಲ್ಲಿಗೆ ಬಂದು” ಎಂದ ದೇವಪ್ಪ.
ಕೇರಳದ ಬದುಕಿನ ಒತ್ತಡ ತಾಳಲಾರದೆ ಶುಂಠಿ ಬೆಳೆಯಲು ಇಲ್ಲಿಗೆ ಬಂದಿದ್ದ ಕುಂಯಿಮೋಣು, ಮಂಜಯ್ಯನ ಗದ್ದೆಯನ್ನು ಒಂದು ಬೆಳೆಗೆ ಎಕರೆಗೆ ಮೂರು ಸಾವಿರ ರೂಪಾಯಿಯಂತೆ ಆರು ಎಕರೆ ಗುತ್ತಿಗೆಗೆ ತೆಗೆದುಕೊಂಡಿದ್ದ. ಗದ್ದೆಯ ಏರಿಯ ಮೇಲೆ ಗುಡಾರ ಹಾಕಿಕೊಂಡು, ಸಾವಿರಾರು ರೂಪಾಯಿ ಖರ್ಚು ಮಾಡಿ, ಕೆಲಸಗಾರರನ್ನೂ ಕೇರಳದಿಂದಲೇ ಕರೆಸಿ, ತನಗೇ ಅಚ್ಚರಿಯಾಗುವಂಥ ಅದ್ಭುತವಾದ ಬೆಳೆ ತೆಗೆದಿದ್ದ. ಸುತ್ತಮುತ್ತಲಿನ ಜಮೀನಿನವರು ಅಸೂಯೆಯಿಂದ ನೋಡುವಂತೆ ಶುಂಠಿ ಬೆಳೆದಿದ್ದ.
ಕಳೆದ ಮೂರು ವರ್ಷಗಳಿಂದ ಇದೇ ರೀತಿ ಅಲೆಮಾರಿ ರೈತನಾಗಿ ಗದ್ದೆಗಳನ್ನು ಗುತ್ತಿಗೆಗೆ ಹಿಡಿದು ಶುಂಠಿ ಬೆಳೆ ಬೆಳೆಯುತ್ತಿದ್ದ. ಕೇರಳದ ಬಡಗರದಲ್ಲಿದ್ದ ಹೆಂಡತಿಯ ಕಡೆಯಿಂದ ಬಳುವಳಿಯಾಗಿ ಸಿಕ್ಕಿದ್ದ ಮನೆ-ಮಠವನ್ನೆಲ್ಲ ಮಾರಿ, ಕಳೆದುಕೊಂಡದ್ದನ್ನೆಲ್ಲ ಕಳೆದುಕೊಂಡಲ್ಲೇ ಹುಡುಕಬೇಕೆಂಬ ಹುಚ್ಚು ಆವೇಶದಲ್ಲಿ ಮಂಜಯ್ಯನ ಗದ್ದೆಯನ್ನು ಗುತ್ತಿಗೆಗೆ ಪಡೆದಿದ್ದ. ಆಗಿನ ಗುತ್ತಿಗೆ ದರಕ್ಕೆ ಹೋಲಿಸಿದರೆ ಎಕರೆಗೆ ಮೂರು ಸಾವಿರ ರೂಪಾಯಿ ಹೆಚ್ಚೇನಲ್ಲವೆಂದು ಭಾವಿಸಿ, ಬದುಕಿದರೆ ಇದರಿಂದಲೇ ಎಂದು ನಿರ್ಧರಿಸಿದ್ದ.
ದೇವರೇ ಗತಿ ಎಂಬಂತೆ, “ಇಂದೇ ನನ್ನ ಕೊನೆಯ ದಿನ” ಎಂದು ಅವಡುಗಚ್ಚಿಕೊಂಡು, ಹೆಂಡತಿ, ಮಗಳು ಹಾಗೂ ಕೆಲಸಗಾರರೊಡನೆ ಸೇರಿ ಬೆಳಿಗ್ಗೆ ಐದೂವರೆ ಗಂಟೆಯಿಂದ ಸಂಜೆ ಏಳು ಗಂಟೆಯವರೆಗೆ ಬಿಡುವಿಲ್ಲದೆ ದುಡಿದಿದ್ದ. ಮೈಯಲ್ಲಿದ್ದ ಮಾಂಸವೆಲ್ಲ ಕರಗುವಂತೆ ಗೇಯ್ದು-ಗೇಯ್ದು ಹಣ್ಣಾಗಿ ಹೋಗಿದ್ದ.
ಇತ್ತ ಮಂಜಯ್ಯ, ತನ್ನಲ್ಲಿದ್ದ ಆರು ಎಕರೆ ಗದ್ದೆಯನ್ನು ಈ ಕುಂಯಿಮೋಣುವಿಗೆ ಗುತ್ತಿಗೆಗೆ ಕೊಟ್ಟು, ದಿನಾ ಬೆಳಗಾದರೆ ಪೇಟೆಗೆ ಹೋಗುವುದು, ಸಂಜೆ ಮನೆಗೆ ಬಂದು ಹೆಂಡತಿಯ ಎದುರು ತಾನು ದೆಹಲಿಯಲ್ಲಿರುವ ಪಾರ್ಲಿಮೆಂಟ್ಗೇ ಹೋಗಿ ಬಂದವನಂತೆ ಬಡಾಯಿ ಕೊಚ್ಚಿಕೊಳ್ಳುವುದು ಮಾಡುತ್ತಿದ್ದ.
ತಾಲ್ಲೂಕು ಕೇಂದ್ರವಾಗಿದ್ದ ಮೂಡಿಗೆರೆಯಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಒಂದಾದ ನಂತರ ಒಂದರಂತೆ ಭೇಟಿ ನೀಡುವುದು, ಕೃಷಿ ಇಲಾಖೆಯಲ್ಲಿ ದೊರೆಯುವ ಸಬ್ಸಿಡಿ, ಸಲಕರಣೆ, ಗೊಬ್ಬರ ಹಾಗೂ ಕೀಟನಾಶಕಗಳ ಬಗ್ಗೆ ವಿಚಾರಿಸುವುದು, ಸೆಕ್ರೆಟರಿ ಮನೆಗೆ ಹೋಗಿ ಪಹಣಿ ಬರೆಸಿಕೊಂಡು ಬರುವುದು, ಆ ಪಹಣಿಯನ್ನು ಲಗತ್ತಿಸಿ ಅರ್ಜಿ ಸಲ್ಲಿಸುವುದು—ಹೀಗೆ ಅವನ ದಿನಚರಿ ಸಾಗುತ್ತಿತ್ತು.
ಮತ್ತೆ ತೋಟಗಾರಿಕಾ ಇಲಾಖೆಗೆ ಹೋಗಿ, ಅಲ್ಲಿ ಸಿಗಬಹುದಾದ ಸಪೋಟಾ ಗಿಡಗಳು, ತೆಂಗಿನ ಗಿಡಗಳಿಗೆ ಅರ್ಜಿ ಗುಜರಾಯಿಸುವುದು; ಅವುಗಳನ್ನು ಮಾರಲು ಯಾರಾದರೂ ಗಿರಾಕಿಗಳು ಸಿಗುತ್ತಾರೆಯೇ ಎಂದು ಹುಡುಕುವುದು; ನಂತರ ರೇಷ್ಮೆ ಇಲಾಖೆ, ಕಾಫಿ ಬೋರ್ಡ್ ಮತ್ತು ಸಂಬಾರ ಮಂಡಳಿಗಳಿಗೆ ಭೇಟಿ ನೀಡಿ, ಅಲ್ಲಿನ ಸವಲತ್ತುಗಳು ಹಾಗೂ ಸಿಗುವ ಗಿಡ-ಔಷಧಗಳನ್ನು ಪಡೆಯುವ ಬಗೆಯನ್ನು ವಿಚಾರಿಸಿ ಅರ್ಜಿ ಸಲ್ಲಿಸುವುದು—ಇವೆಲ್ಲವೂ ಅವನ ನಿತ್ಯದ ಕೆಲಸಗಳಾಗಿದ್ದವು.
ಆದರೆ, ಇದನ್ನೆಲ್ಲ ಅವನು ತನ್ನ ಜಮೀನಿನಲ್ಲಿ ನೆಡಲು ಅಥವಾ ಉಪಯೋಗಿಸಿಕೊಳ್ಳಲು ಮಾಡುತ್ತಿರಲಿಲ್ಲ. ತನಗಿದ್ದ ಮೂರು ಎಕರೆ ಕಾಫಿ, ಏಲಕ್ಕಿ ಮತ್ತು ಅಡಕೆ ತೋಟವನ್ನು ಹಾಳುಬಿಟ್ಟು ಹತ್ತು ವರ್ಷಗಳೇ ಕಳೆದಿದ್ದವು. ದಿನದ ಹೆಚ್ಚಿನ ಸಮಯವನ್ನು ಪುಟ್ಲಾಯರಿಕೆ ಮಾಡಿಕೊಂಡು, ಅಲ್ಲಲ್ಲಿ ಪಟ್ಟಾಂಗ ಹೊಡೆಯುತ್ತಾ ಕಾಲ ಕಳೆಯುತ್ತಿದ್ದ. ತನ್ನಂತೆಯೇ ಈ ರೀತಿಯ ಖಯಾಲಿಯನ್ನೇ ಉದ್ಯೋಗವಾಗಿಸಿಕೊಂಡಿದ್ದವರನ್ನು ಗೆಳೆಯರನ್ನಾಗಿ ಮಾಡಿಕೊಂಡು, ಅಲ್ಲಲ್ಲಿ ಸರ್ಕಾರಿ ಕಚೇರಿಗಳಿಗೆ ಲೋಕಾಯುಕ್ತರಂತೆ ಭೇಟಿ ನೀಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದ.
ಕೆಲವು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳನ್ನು ಒಂದಲ್ಲ ಒಂದು ರೀತಿಯಲ್ಲಿ ಪುಸಲಾಯಿಸಿ, ನಿಜವಾಗಿಯೂ ಕೃಷಿ ಮಾಡಿಕೊಂಡು ಸಬ್ಸಿಡಿ ಮತ್ತು ಸರ್ಕಾರದ ನೆರವಿನ ಅಗತ್ಯವಿದ್ದ ಪ್ರಾಮಾಣಿಕ ರೈತರನ್ನು ಈ ಸರ್ಕಾರಿ ಕಚೇರಿಗಳ ಹತ್ತಿರಕ್ಕೂ ಸುಳಿಯದಂತೆ ಮಾಡಿಬಿಟ್ಟಿದ್ದ.
“ಮೂರೂ ಬಿಟ್ಟವರು ಊರಿಗೇ ದೊಡ್ಡವರು” ಅಂತಾರಲ್ಲ; ಹಾಗೆಯೇ ಈ ಸಬ್ಸಿಡಿ ಮಾಫಿಯಾದ ನಾಯಕ ಮಂಜಯ್ಯ, ಆಯಕಟ್ಟಿನ ಅಧಿಕಾರಿಯೊಬ್ಬರನ್ನು ಬುಕ್ ಮಾಡಿಕೊಂಡು, ಅವರಿಗೂ ತಿನ್ನಲು ಬಿಟ್ಟು, ತಾನೂ ನುಂಗಿ, ತನ್ನ ಸಂಗಡಿಗರಿಗೂ ಸಾಕಷ್ಟು ಗಳಿಸಲು ಅವಕಾಶ ಮಾಡಿಕೊಟ್ಟಿದ್ದ.
ಸರ್ಕಾರದ ಲೆಕ್ಕದಲ್ಲಿ ರೈತರಿಗೆ ಸೇರಬೇಕಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸವಲತ್ತುಗಳು, ಸಭೆ-ಸಮಾರಂಭಗಳಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸುವುದು, ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಿಸುವುದು ಹಾಗೂ ಕಚೇರಿಗಳ ಅಂಕಿ-ಅಂಶಗಳಿಗೆ ಮಾತ್ರ ಸೀಮಿತವಾಗಿದ್ದವು.
ಕೆಲವು ಸೋಮಾರಿಗಳು, ಪೇಟೆ ಸುತ್ತುವ ಖಯಾಲಿಯುಳ್ಳ ಮಂಜಯ್ಯನಂತಹ ಸಮಯಸಾಧಕ ಅರೆಕಾಲಿಕ ರೈತರು, ಇಡೀ ರೈತ ಸಮುದಾಯದ ಪ್ರಾಮಾಣಿಕತೆಯನ್ನೇ ಪ್ರಶ್ನಿಸುವಂತೆ ನಡೆದುಕೊಳ್ಳುತ್ತಿದ್ದರು.
ಖದೀಮರು ತಮ್ಮ ಸುತ್ತಲೂ ಒಂದು ಪರತಂತ್ರಜೀವಿಗಳ ಸಮೂಹವನ್ನೇ ಸೃಷ್ಟಿಸಿಕೊಂಡು, ಅವರಿಂದಲೇ ಸಭೆ-ಸಮಾರಂಭಗಳಲ್ಲಿ ಹಾರ-ತುರಾಯಿ ಹಾಕಿಸಿಕೊಂಡು, ಪರಾಕು ಹೇಳಿಸಿಕೊಳ್ಳುವುದು ಶತಶತಮಾನಗಳಿಂದಲೂ ನಡೆದು ಬಂದದ್ದೇ!
ಧನಂಜಯ ಜೀವಾಳ ಬಿ.ಕೆ.
