ಪಕ್ಕದಲ್ಲಿ ಮಾತನಾಡುತ್ತಾ ನಿಂತಿದ್ದವರ ಮುಸುಡಿಗೇ ಹೋಗಿ ಬಡಿಯಿತು.
“ಯಾವನ್ರಲ ಅವ್ನು, …..” ಎಂದು ಕೋಲಿನ ಪೆಟ್ಟು ತಿಂದು, ಒಡೆದ ತುಟಿಯನ್ನು ಕೈಯಿಂದ ಒತ್ತಿಕೊಂಡು ತಿರುಗಿ ನೋಡಿದ ಶ್ರೀನಿವಾಸನಿಗೆ, ರ್ರುಮ್ ರ್ರುಮ್ ಎಂದು ಎರಡು ಬ್ಯಾಣಗಳು ಬಿದ್ದವು. ಒಂದು ಕಣ್ಣಿನ ಹುಬ್ಬಿನ ಮೇಲೂ, ಇನ್ನೊಂದು ಕುತ್ತಿಗೆಯ ಬಳಿಯೂ ಬಾರಿಸಿಯೇಬಿಟ್ಟವು.
ಕಾಫಿ ತೋಟದೊಳಗಿನ ತೊಟ್ಟಿಲು ಗುಂಡಿಯಲ್ಲಿ ಅಡಗಿಸಿಟ್ಟು, ಹಂಚಿಕೊಂಡು ಭಟ್ಟಿಸಾರಾಯಿ ಸೇವಿಸುತ್ತಿದ್ದ ಹತ್ತಾರು ಮಂದಿಯ ಮುಖಮೂತಿ ನೋಡದೆ ಬ್ಯಾಣಗಳು ದಾಳಿ ಮಾಡಿದವು.
ಇಸ್ಪೀಟಾಡುತ್ತಿದ್ದ ರಾಜ, ಗುಲಾಮ, ಕಳವಾರ, ಜೋಕರ್ಗಳು ತಿಕದ ಸುತ್ತ ಸುತ್ತಿಕೊಂಡಿದ್ದ ಲುಂಗಿಯನ್ನು ಬಿಚ್ಚಿಕೊಂಡು, ತಲೆಗೆ ಮುಸುಕು ಹಾಕಿಕೊಂಡು, “ಈ ತೊಂಡೂ ಬೇಡ, ಚೌಡೀನೂ ಬೇಡ!” ಎಂದು ರಾಮ್ನಳ್ಳಿ ಗದ್ದೆ ಹಾರಿ ದಿಕ್ಕಾಪಾಲಾಗಿ ಓಡಿಹೋದರು.
ಅಷ್ಟರಲ್ಲಿ ಮಂಜಯ್ಯ ಅಂಡ್ ಗ್ಯಾಂಗ್, ಚೌಡೀಹಬ್ಬದ ಕೊನೆಯ ಹಂತದ ಊಟಕ್ಕಾಗಿ ಸೋಡಾ ಬೆನ್ನಣ್ಣನ ಆಟೋದಿಂದ ಕೆಳಗಿಳಿದವರೇ, ಬ್ಯಾಣದ ದಾಳಿಗೆ ತಲೆಕೆಟ್ಟವರಂತಾಗಿ ಹಿಂದಿರುಗಿ ಓಡಿದರು. ಬಳಿಕ ತಾವು ಬಂದಿದ್ದ ಆಟೋ ಹತ್ತಲು ಉಪಕ್ರಮಿಸಿದರು.
ಆ ಗದ್ದಲಮಯ ಗೊಂದಲವನ್ನು ಕಂಡ ಸೋಡಾ ಬೆನ್ನಣ್ಣ, “ಸತ್ತೆನೋ, ಕೆಟ್ಟೆನೋ!” ಎಂದುಕೊಂಡು, ಅಷ್ಟರಲ್ಲಾಗಲೇ ಆಟೋದೊಂದಿಗೆ ಪಂಪ್ಹೌಸ್ ಅಪ್ಪುವನ್ನೂ ದಾಟಿಯಾಗಿತ್ತು.

