ಕೊರಟಗೆರೆ: ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಶನಿವಾರ ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಶಾಲೆಗಳ 24 ತಂಡಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ಸಲ್ಲಿಸಿದರು.

ತಹಶೀಲ್ದಾರ್ ಮಂಜುನಾಥ್ ಧ್ವಜಾರೋಹಣ ನೆರವೇರಿಸಿ, ಸುಮಾರು 45 ನಿಮಿಷಗಳ ಕಾಲ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ದೇಶದ ಏಕತೆ, ಅಖಂಡತೆ ಹಾಗೂ ಸಂವಿಧಾನದ ಆಶಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ನಮಗೆ ಸುಲಭವಾಗಿ ದೊರೆತದ್ದಲ್ಲ. ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ. ಕೊರಟಗೆರೆ ಸೇರಿದಂತೆ ತುಮಕೂರು ಜಿಲ್ಲೆಯ ಅನೇಕ ಹೋರಾಟಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಆದರ್ಶಗಳನ್ನು ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದ ಅಭಿವೃದ್ಧಿಯೊಂದಿಗೆ ಪ್ರಜೆಗಳ ಹಾಗೂ ಕುಟುಂಬಗಳ ಅಭಿವೃದ್ಧಿಯೂ ನಿರಂತರವಾಗಿ ಸಾಗಬೇಕು. ಶಾಂತಿ, ಐಕ್ಯತೆ ಮತ್ತು ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಸಾಧನೆ ಮಾಡುವ ಅವಕಾಶ ಭಾರತದಲ್ಲಿ ಇದೆ ಎಂದು ಅವರು ಹೇಳಿದರು.
ರೋಟರಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸಹಕಾರ
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕೊರಟಗೆರೆ ರೋಟರಿ ಕ್ಲಬ್ ಸಹಭಾಗಿತ್ವ ವಹಿಸಿತು. ರೋಟರಿ ಕ್ಲಬ್ ಅಧ್ಯಕ್ಷ ವಿ.ಕೆ. ನರಸಿಂಹಮೂರ್ತಿ ಹಾಗೂ ಕಾರ್ಯದರ್ಶಿ ಹೊನ್ನೇಶ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ 2,000 ನೋಟ್ಬುಕ್ಗಳು ಮತ್ತು ಲೇಖನಿಗಳನ್ನು ವಿತರಿಸಿ, ಸಿಹಿ ಹಂಚಲಾಯಿತು.
ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ರೋಟರಿ ಸಂಸ್ಥೆ ತೋರುತ್ತಿರುವ ಕಾಳಜಿಯನ್ನು ಶ್ಲಾಘಿಸಿದ ತಹಶೀಲ್ದಾರ್ ಮಂಜುನಾಥ್, ಕ್ಲಬ್ನ ಎಲ್ಲಾ ಸದಸ್ಯರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದರು.

ಮಕ್ಕಳಿಂದ ದೇಶಭಕ್ತಿ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ‘ವಂದೇ ಮಾತರಂ’ ಗೀತೆಯನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿ ದೇಶಭಕ್ತಿಯ ವಾತಾವರಣ ನಿರ್ಮಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕೊರಟಗೆರೆ ತಾಲ್ಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಅನೇಕ ಮಹನೀಯರು ಸಲ್ಲಿಸಿದ ತ್ಯಾಗ ಮತ್ತು ಬಲಿದಾನವನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.
ತ್ರಿವರ್ಣ ಧ್ವಜ, ದೇಶಭಕ್ತಿ ಘೋಷಣೆಗಳು, ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೊರಟಗೆರೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವರದಿ: ನರಸಿಂಹಯ್ಯ ಹೊಸಕೋಟೆ
