ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ತಡರಾತ್ರಿ ಅಡುಗೆ ಕಂಟ್ರಾಕ್ಟರ್ ಒಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆನಂದ್ (48) ಎಂದು ಗುರುತಿಸಲಾಗಿದೆ.
ಆನಂದ್ ಅಡುಗೆ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ದುಷ್ಕರ್ಮಿ ಐದಾರು ಬಾರಿ ಚಾಕುವಿನಿಂದ ಇರಿದು ಸ್ಥಳದಲ್ಲೇ ಹತ್ಯೆಗೈದಿದ್ದಾನೆ. ಕೊಲೆ ಬಳಿಕ ಆರೋಪಿಯಾದ ಧರ್ಮೇಂದ್ರ ಪರಾರಿಯಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಒಂದೇ ಮಹಿಳೆಯ ಜೊತೆಗಿನ ಅನೈತಿಕ ಸಂಬಂಧವೇ ಈ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಜೊತೆ ಸುಮಾರು ಎಂಟು ವರ್ಷಗಳಿಂದ ಧರ್ಮೇಂದ್ರ ಗೆಳೆತನ ಹೊಂದಿದ್ದನು. ಇತ್ತೀಚಿನ ದಿನಗಳಲ್ಲಿ ಇದೇ ಮಹಿಳೆಯೊಂದಿಗೆ ಆನಂದ್ ಸಂಪರ್ಕ ಹೊಂದಿದ್ದ ವಿಚಾರ ಇಬ್ಬರ ನಡುವೆ ವೈಮನಸ್ಸಿಗೆ ಕಾರಣವಾಗಿತ್ತು.
ನೆನ್ನೆ ರಾತ್ರಿ ಬಾರ್ನಲ್ಲಿ ಮಾತನಾಡುವ ವೇಳೆ ಆನಂದ್ ಮತ್ತು ಧರ್ಮೇಂದ್ರ ನಡುವೆ ಗಲಾಟೆ ನಡೆದಿದ್ದು, ನಂತರ ಆನಂದ್ ಮನೆಗೆ ತೆರಳಿದ್ದ. ಬಳಿಕ ಧರ್ಮೇಂದ್ರ ಫೋನ್ ಮಾಡಿ ಆನಂದ್ನನ್ನು ಮತ್ತೆ ಕರೆಸಿಕೊಂಡಿದ್ದಾನೆ. ವಾಪಸ್ ಬಂದ ಆನಂದ್ ಜೊತೆ ಮತ್ತೊಮ್ಮೆ ಗಲಾಟೆ ನಡೆದಿದ್ದು, ಈ ವೇಳೆ ಧರ್ಮೇಂದ್ರ ಚಾಕುವಿನಿಂದ ಇರಿದು ಆನಂದ್ನನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಮದ್ಯಪಾನ ಸ್ಥಿತಿಯಲ್ಲಿ ನಡೆದ ಈ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಘಟನೆ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
