ಹಾಸನ- ಪರಿಸರ ಜೀವಶಕ್ತಿಯ ಮೂಲವಾಗಿದೆ ಅದನ್ನು ಉಳಿಸಿ ಸಂರಕ್ಷಿಸಬೇಕು, ನಾವೆಲ್ಲರೂ ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕಬೇಕು ಎಂದು ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾ. ಹಿದಾಯತ್ ಉಲ್ಲಷರೀಫ್ ಹೇಳಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಕೈಗಾರಿಕೆಗಳು ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 1972ರ ನಂತರ ಪ್ರತಿ ವರ್ಷ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದರ ಉದ್ದೇಶ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸುವಂತಹದ್ದಾಗಿದೆ ಹಾಗಾಗಿ ನಾವುಗಳೆಲ್ಲರೂ ಪರಿಸರವನ್ನು ಉಳಿಸಲು ಎಲ್ಲ ಜಾತಿ ಧರ್ಮ ಮರೆತು ಒಂದಾಗಿ ಹೋರಾಡಬೇಕು ಎಂದು ಹೇಳಿದರು.
ಹವಮಾನ ಬದಲಾವಣೆ, ಅಕಾಲಿಕ ಕ್ಷಾಮ, ಚಂಡಮಾರುತಕ್ಕೆ ಪರಿಸರ ಮಾಲಿನ್ಯವೇ ಕಾರಣವಾಗಿದೆ. ಇಂದು ಫಲವತ್ತಾದ ಭೂಮಿ ಮರುಭೂಮಿಯಾಗಿ ಮಾರ್ಪಟ್ಟಿದೆ ಹೀಗೆ ಪರಿಸರ ನಾಶ ಮಾಡುವುದು ಮನುಷ್ಯ ಕುಲ, ತನ್ನನ್ನೇ ತಾನು ವಿನಾಶದ ಅಂಚಿಗೆ ಕರೆದೊಯ್ಯುವಂತದ್ದಾಗಿದೆ ಹಾಗಾಗಿ ಪರಿಸರ ಸಂರಕ್ಷಿಸುವಂಥದ್ದು ನಮ್ಮೆಲ್ಲರ ಆದ್ಯಕರ್ತವ್ಯ. ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡಿ ನಮ್ಮ ಪೂರ್ವಜರು ಬಳುವಳಿಯಾಗಿ ಕೊಟ್ಟಂತಹ ಸ್ವಚ್ಛಂದವಾದ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ನೀಡೋಣ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸಿ ಸತ್ಯಭಾಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಕೈಗಾರಿಕೆಗಳ ಹೊಣೆಗಾರಿಕೆ ಹಿಂದಿಗಿಂತ ಹೆಚ್ಚಿನದಾಗಿದೆ. ಭೂಮಿಯ ಮೇಲೆ ಜೀವಿಸುವ ಹಕ್ಕು ಕೇವಲ ಮಾನವರಿಗಷ್ಠೇ ಅಲ್ಲದೆ ಪ್ರತಿಯೊಂದು ಜೀವ ಜಂತುಗಳಿಗೂ ಮರ ಗಿಡಗಳಿಗೂ ಇದೆ ಎಂದು ತಿಳಿಸಿದರು.
ಪ್ರಸ್ತುತ ದಿನಮಾನದಲ್ಲಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವುದು, ಕಾಡ್ಗಿಚ್ಚು ಸಂಭವಿಸುತ್ತಿರುವುದು ಪರಿಸರ ಮಾಲಿನ್ಯದಿಂದಾಗಿದೆ ಹಾಗಾಗಿ ನಾವುಗಳೆಲ್ಲರೂ ಮುಂದಿನ ಪೀಳಿಗೆಗೆ ಸುಸ್ಥಿರವಾದ ಭೂಮಿಯನ್ನ ಕೊಡಬೇಕು. ಮಕ್ಕಳಿಗೂ ಪರಿಸರದ ಕುರಿತ ಅರಿವನ್ನು ಮೂಡಿಸಬೇಕು. ಪ್ರತಿಯೊಬ್ಬರು ಪ್ರಕೃತಿಗೆ ನನ್ನ ಕೊಡುಗೆ ಏನಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಹಿಂದೆ ಪೂರ್ವಜರು ಸೂರ್ಯನಿಗೆ ನಮಸ್ಕರಿಸುತ್ತಿದ್ದರು, ಯೋಗಭ್ಯಾಸ ಮಾಡುತ್ತಿದ್ದರು ಅದನ್ನು ಇಂದು ನಾವುಗಳೆಲ್ಲರೂ ಅಳವಡಿಸಿಕೊಳ್ಳಬೇಕು, ಪ್ರಕೃತಿಯು ಸಹನೆ ಮೀರಿದ ನಂತರ ತಿರುಗಿ ನಾವು ಪ್ರಕೃತಿಗೆ ಏನು ಮಾಡಿರುತ್ತೇವೋ ಅದನ್ನೇ ನಮಗೆ ಕೊಡುತ್ತದೆ ಹಾಗಾಗಿ ಸಾಧ್ಯವಾದಷ್ಟು ಸರಳತೆಯನ್ನು ಮೈಗೂಡಿಸಿಕೊಂಡು ಮನೆಯಿಂದಲೇ ಸಣ್ಣಪುಟ್ಟ ವಿಷಗಳಲ್ಲಿಯೂ ಸಹ ಪರಿಸರವನ್ನು ಮಲಿನ ಮಾಡದೆ ಸಂರಕ್ಷಿಸಬೇಕು ಎಂದು ಹೇಳಿದರು.
ಪ್ರಸ್ತುತ ಜಿಲ್ಲೆಯಲ್ಲಿ ಅನೇಕ ಕೆರೆಗಳ ನೀರು ಯೋಗ್ಯವಾದ ನೀರಾಗಿಲ್ಲ ಹಾಗಾಗಿ ಕೆರೆಗಳ ನೀರನ್ನು ಪರೀಕ್ಷೆ ಮಾಡಲು ತಿಳಿಸಿದ್ದೇನೆ ನೀವುಗಳು ನೀರನ್ನ ಮಿತವಾಗಿ ಬಳಸಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ತಮ್ಮ ತಂದೆ, ತಾಯಿ, ಸಹೋದರರ ಹೆಸರಿನಲ್ಲಿ ಗಿಡವನ್ನು ನೆಡುವ ಮೂಲಕ ನಿಮ್ಮದೇ ಆದ ದಾರಿಯಲ್ಲಿ ಪ್ರಕೃತಿಗೆ ಕೊಡುಗೆ ನೀಡಿ ಎಂದರು.
ಇದೇ ಸಂದರ್ಭದಲ್ಲಿ ಪ್ರತೀಯೊಬ್ಬರೂ ತಮ್ಮ ಮನೆಯಲ್ಲಿ ಅಥವಾ ಶಾಲೆಯಲ್ಲಿ, ರಸ್ತೆ ಬದಿಯಲ್ಲಿ ಒಂದೊಂದು ಗಿಡವನ್ನು ನೆಡುತ್ತೇವೆ ಎಂದು ಪ್ರತಿಜ್ಞೆ ಮಾಡಲಾಯಿತು ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಕನ್ನಡ ಮತ್ತು ಇಂಗ್ಲಿμï ಭಾಷೆಯಲ್ಲಿ ಆಯೋಜಿಸಿದ್ದ ರಿಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಬಿ.ಆರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ ಪ್ರಸನ್ನ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಹೆಚ್.ಜಿ ಕಾಂಚನ ಮಾಲ, ಪರಿಸರ ಅಧಿಕಾರಿ ಸುಗಂಧ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
