ಹಾಸನ: ನಗರದ ಹೇಮಾವತಿ ನಗರದಲ್ಲಿರುವ ಎಲೈಟ್ ಶಾಲೆಯಲ್ಲಿ ಶಾಲೆಯ ಸಂಸ್ಥಾಪಕರಾದ ಕೆ.ಸಿ. ಪುಟ್ಟಸ್ವಾಮಿ ಗೌಡ ಅವರ ಜನ್ಮದಿನದ ಅಂಗವಾಗಿ ಸಂಸ್ಥಾಪಕರ ದಿನಾಚರಣೆ-2026 ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಸಿ. ಪುಟ್ಟಸ್ವಾಮಿ ಗೌಡ ಅವರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ಅತ್ಯಂತ ಬಡತನದಲ್ಲಿ ಬೆಳೆದ ತಾವು, 7ನೇ ತರಗತಿಯಲ್ಲಿದ್ದಾಗಲೇ ವ್ಯವಸಾಯದಲ್ಲಿ ತೊಡಗಿಸಿಕೊಂಡು ದುಡಿಯುವ ಹವ್ಯಾಸ ಬೆಳೆಸಿಕೊಂಡಿದ್ದಾಗಿ ತಿಳಿಸಿದರು. ಚಿಕ್ಕಮ್ಮನವರ ಮನೆಯಲ್ಲಿ ಬೆಳೆದ ತಾವು ಜೀವನದಲ್ಲಿ ಉತ್ತಮ ಸಹವಾಸ ಹಾಗೂ ಹಿರಿಯರ ಮಾರ್ಗದರ್ಶನದಿಂದ ವೃತ್ತಿಜೀವನದಲ್ಲಿ ಮುನ್ನಡೆದಿರುವುದಾಗಿ ಹೇಳಿದರು.
ಮಕ್ಕಳಿಗೆ ಉತ್ತಮ ಸಹವಾಸದ ಮಹತ್ವವನ್ನು ತಿಳಿಸಿದ ಅವರು, “ಸಹವಾಸದಿಂದ ಬುದ್ಧಿ ಬೆಳೆಯುತ್ತದೆ” ಎಂಬ ಸಂದೇಶವನ್ನು ನೀಡಿದರು. ಒಳ್ಳೆಯ ನಡತೆ ಹೊಂದಿರುವವರೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ಜಪಾನೀಯರನ್ನು ಮಾದರಿಯಾಗಿಸಿಕೊಂಡು ಸಮಯಕ್ಕೆ ಬೆಲೆ ನೀಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದರು.
“ದುಡ್ಡು ಖರ್ಚು ಮಾಡಿದವನು ಎಂದಿಗೂ ಬಡವನಾಗುವುದಿಲ್ಲ, ಆದರೆ ಸಮಯ ಖರ್ಚು ಮಾಡಿದವನು ನಿಜವಾಗಿಯೂ ಬಡವನಾಗುತ್ತಾನೆ” ಎಂಬ ಗಾದೆಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಶಿಕ್ಷಣ ಹಾಗೂ ಭವಿಷ್ಯದ ಗುರಿಗಳತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಖಜಾಂಚಿ ಹಾಗೂ ಸಂಸ್ಥಾಪಕರ ಸೊಸೆಯಾದ ಶ್ರೀಮತಿ ಸಪ್ನ ಕಿರಣೆಗೌಡ ಅವರು ತಮ್ಮ ಅಪ್ಪಾಜಿಯವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿ, ಹಿರಿಯರು ಹಾಗೂ ಗುರುಗಳ ಮಾರ್ಗದರ್ಶನದಿಂದಲೇ ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಶಾಲೆಯ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಮಾತನಾಡಿ, ಕೆ.ಸಿ. ಪುಟ್ಟಸ್ವಾಮಿ ಗೌಡ ಅವರ ಜೀವನ ಹಾಗೂ ಸಾಧನೆಗಳು ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಶಾಲೆಯ ಕನ್ನಡ ಅಧ್ಯಾಪಕ ಆನಂದ್ ಅವರು ಜನ್ಮದಿನದ ಶುಭಾಶಯ ಕೋರುವ ದಾಸಪದವನ್ನು ಸುಶ್ರಾವ್ಯವಾಗಿ ಹಾಡಿದರು. ಶಾಲೆಯ ಪುಟಾಣಿಗಳು ನೃತ್ಯದ ಮೂಲಕ ಸಂಸ್ಥಾಪಕರಿಗೆ ಶುಭಾಶಯ ಸಲ್ಲಿಸಿದರು. ಬೋಧಕವರ್ಗದ ಶಿಕ್ಷಕಿಯರು ಆರತಿ ಬೆಳಗಿದರು. ಬಳಿಕ ಶಾಲೆಯ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು.
ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂಸ್ಥಾಪಕರಾದ ಕೆ.ಸಿ. ಪುಟ್ಟಸ್ವಾಮಿ ಗೌಡ ಅವರಿಗೆ ತುಂಬುಹೃದಯದ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರಾಂಶುಪಾಲರು ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
