ಹಾಸನ- ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಊಟಕ್ಕೆ ಮನೆಗೆ ತೆರಳುತ್ತಿದ್ದ ವೇಳೆ ಹೆಡ್ಕಾನ್ಸ್ಟೇಬಲ್ರ ಬೈಕ್ಗೆ ನಗರ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಮುಖ್ಯಪೇದೆ ಬೀರಲಿಂಗ (41) ಅವರು ಸ್ಥಳಾಂತರಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತ ಬೀರಲಿಂಗ ಅವರು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಮಧ್ಯಾಹ್ನ ಪೊಲೀಸ್ ಕ್ವಾಟರ್ಸ್ನಲ್ಲಿರುವ ತಮ್ಮ ಮನೆಗೆ ಊಟಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಕ್ವಾಟರ್ಸ್ಗೆ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ KA-42-F-2052 ಸಂಖ್ಯೆಯ ನಗರ ಸಾರಿಗೆ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಬೀರಲಿಂಗ ಅವರನ್ನು ತಕ್ಷಣವೇ ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದು: Watch Video- ಚಲಿಸುತ್ತಿದ್ದ ಆಟೋ ಮೇಲೆ ಕಾಡುಕೋಣ ದಾಳಿ: ಇಬ್ಬರಿಗೆ ಗಾಯ
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.
ಈ ದುರ್ಘಟನೆಯಿಂದ ಪೊಲೀಸ್ ವಲಯದಲ್ಲಿ ತೀವ್ರ ಶೋಕಾವರಣ ಮೂಡಿದ್ದು, ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಮೃತ ಹೆಡ್ಕಾನ್ಸ್ಟೇಬಲ್ರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.