ಹಾಸನ, ಆ.8: ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ಪಕ್ಷದ ಬಾಗಿಲು ಸದಾ ತೆರೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಆಹ್ವಾನ ನೀಡಿದ್ದಾರೆ.
ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಗೆ ಶನಿವಾರ ಸಂಜೆ ಭೇಟಿ ನೀಡಿ ತಾಯಿಯ ಸಮಾಧಿ ದರ್ಶನ ಪಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಭರವಸೆ ಈಡೇರದೆ ಹಲವು ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೋವಿನಲ್ಲಿರುವ ಶಾಸಕರು ಜೆಡಿಎಸ್ಗೆ ಬಂದರೆ ಅವರನ್ನು ಮುಕ್ತವಾಗಿ ಸ್ವಾಗತಿಸಲಾಗುವುದು ಎಂದರು.
‘ಕಾಲವೇ ಎಲ್ಲವನ್ನೂ ನಿರ್ಧರಿಸಲಿದೆ’
ಮಂತ್ರಿಸ್ಥಾನದ ನಿರೀಕ್ಷೆ ಹುಸಿಯಾಗಿರುವ ಶಾಸಕರಿಗೆ ಜೆಡಿಎಸ್ ಸಾಂತ್ವನ ಹಾಗೂ ಪರಿಹಾರ ನೀಡುವ ಪಕ್ಷವಾಗಿದೆ. ಅಸಮಾಧಾನಿತರು ನಮ್ಮತ್ತ ಬಂದರೆ ಅವರ ನೋವು ಶಮನವಾಗುವುದರ ಜೊತೆಗೆ ಭವಿಷ್ಯದಲ್ಲಿ ಜನಪರ ತೀರ್ಮಾನಗಳನ್ನು ಕೈಗೊಳ್ಳಲು ಶಕ್ತಿ ದೊರೆಯಲಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅನಿವಾರ್ಯವಾಗಿ ಕೆಲವರು ಕಾಂಗ್ರೆಸ್ ತೊರೆಯುವ ಸಾಧ್ಯತೆಯಿದೆ ಎಂದು ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಮುಗಿಸುವುದು ಹಗಲುಗನಸು
ಹಳೇ ಮೈಸೂರು ಭಾಗವನ್ನು ಗುರಿಯಾಗಿಸಿಕೊಂಡು ಕೆಲವರಿಗೆ ಸಚಿವ ಸ್ಥಾನ ನೀಡಿರುವುದರಿಂದ ಜೆಡಿಎಸ್ಗೆ ದೊಡ್ಡ ನಷ್ಟವಾಗುವುದಿಲ್ಲ. ಜೆಡಿಎಸ್ ಅನ್ನು ಮುಗಿಸುತ್ತೇವೆ ಎನ್ನುವುದು ಕೆಲವರ ಹಗಲುಗನಸು. ಪಕ್ಷದ ಖಜಾನೆ ಆರ್ಥಿಕವಾಗಿ ತುಂಬಿಲ್ಲದಿರಬಹುದು. ಆದರೆ ಪಕ್ಷವನ್ನು ಉಳಿಸಿ ಬೆಳೆಸುವ ಶಕ್ತಿ ನಾಡಿನ ಜನರಲ್ಲಿದೆ. ಅವರೇ ನಮ್ಮ ಬೆನ್ನೆಲುಬು ಎಂದು ಹೇಳಿದರು.
ಈಗಿನ ರಾಜ್ಯ ಸರ್ಕಾರ ಕಾಂಗ್ರೆಸ್ ಕ್ಯಾಬಿನೆಟ್ಗಿಂತ ಒಂದು ರೀತಿಯ ಸಮ್ಮಿಶ್ರ ಸರ್ಕಾರದಂತೆ ಕಾಣುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.
ಹೊರಟ್ಟಿ ರಾಜೀನಾಮೆ ಕುರಿತು ಆರೋಪ
ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 8–10 ಶಾಸಕರು ಹೊರಟ್ಟಿ ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಆರೋಪಿಸಿದರು.
ರಾಜೀನಾಮೆ ಪತ್ರವನ್ನು ಮೊದಲೇ ಸಿದ್ಧಪಡಿಸಿಕೊಂಡು ಒತ್ತಡದ ಮೂಲಕ ರಾಜೀನಾಮೆ ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅವರು ದೂರಿದರು.
ಗುಬ್ಬಿ ಶ್ರೀನಿವಾಸ್ ಬಗ್ಗೆ ಬೇಸರ
ಶಾಸಕ ಗುಬ್ಬಿ ಶ್ರೀನಿವಾಸ್ ವಿಚಾರವಾಗಿ ಮಾತನಾಡಿದ ಅವರು, ಶ್ರೀನಿವಾಸ್ ಅವರನ್ನು ತಾವೇ ಕರೆದು ಸಚಿವರನ್ನಾಗಿ ಮಾಡಿದ್ದೆ ಎಂಬ ಮಾತಿನಲ್ಲಿ ಸತ್ಯವಿದೆ. ತಮ್ಮೊಂದಿಗೆ ಆತ್ಮೀಯವಾಗಿದ್ದ ಅವರನ್ನು 2013ರ ನಂತರ ತಮ್ಮಿಂದಲೇ ಬೆಳೆದ ಕೆಲವರು ‘ಬ್ರೈನ್ವಾಷ್’ ಮಾಡಿ ತಮ್ಮ ಬಗ್ಗೆ ತಪ್ಪು ಕಲ್ಪನೆ ಮೂಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಬಿಡದಿ ಟೌನ್ಶಿಪ್ ವಿರುದ್ಧ ಪಾದಯಾತ್ರೆ
ಬಿಡದಿ ಟೌನ್ಶಿಪ್ ನಿರ್ಮಾಣಕ್ಕೆ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಎಚ್ಚರಿಕೆ ನೀಡಲು ಭಾನುವಾರದಿಂದ ಮೂರು ದಿನಗಳ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೈರಮಂಗಲದ ನೈಸ್ ರಸ್ತೆಯಿಂದ ಆರಂಭವಾಗಲಿರುವ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
‘ಹಾಸನಕ್ಕೆ ಸಚಿವ ಸ್ಥಾನ ಸಿಕ್ಕಿದೆ’
ಕೆ.ಎಂ. ಶಿವಲಿಂಗೇಗೌಡ ಅವರಿಗೆ ಸಚಿವ ಸ್ಥಾನ ದೊರೆತಿರುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಹಾಸನಕ್ಕೆ ಒಂದು ಸಚಿವ ಸ್ಥಾನ ಸಿಕ್ಕಿದೆ. ಅವರು ಒಳ್ಳೆಯ ಕೆಲಸ ಮಾಡಲಿ. ನಾವೇಕೆ ಅಸೂಯೆ ಪಡಬೇಕು” ಎಂದರು.
ತಾಯಿಯನ್ನು ನೆನೆದು ಭಾವುಕರಾದ ಕುಮಾರಸ್ವಾಮಿ
ಸುದ್ದಿಗೋಷ್ಠಿಗೂ ಮುನ್ನ ತಾಯಿಯ ಸಮಾಧಿ ದರ್ಶನ ಪಡೆದ ಕುಮಾರಸ್ವಾಮಿ ಭಾವುಕರಾದರು. “ಇನ್ಮುಂದೆ ನಮ್ಮ ತಾಯಿಯನ್ನು ಜೀವಂತವಾಗಿ ನೋಡಲು ಸಾಧ್ಯವಿಲ್ಲ. ಈ ಪುಣ್ಯಭೂಮಿಯಲ್ಲಿ ಅವರ ಅಂತಿಮ ಕಾರ್ಯ ನೆರವೇರಿಸಿದ್ದೇನೆ. ಅವರು ಸದಾ ನಮ್ಮ ಮುಂದಿದ್ದಾರೆ ಎಂದು ಪ್ರತಿನಿತ್ಯ ನೆನಪಿಸಿಕೊಳ್ಳುತ್ತೇವೆ” ಎಂದು ಕಣ್ಣೀರಾದರು.
