ಹಾಸನ: ಹಾಸನ ಜಿಲ್ಲೆಯ ಪ್ರತಿಷ್ಠಿತ ಪ್ರೈಡ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2026–27ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ 64 ಹಾಗೂ ಬಾಲಕಿಯರ ವಿಭಾಗದಲ್ಲಿ 58 ಸೇರಿದಂತೆ ಒಟ್ಟು 122 ಪದಕಗಳನ್ನು ಪಡೆದು ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಬಾಲಕರ ವಿಭಾಗದಲ್ಲಿ 100 ಮೀ., 200 ಮೀ., 400 ಮೀ. ಓಟ, 4×100 ಮೀ. ಹಾಗೂ 4×400 ಮೀ. ರಿಲೆ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಗುಂಡು ಎಸೆತ, ಡಿಸ್ಕಸ್ ಎಸೆತ, ಜಾವಲಿನ್ ಎಸೆತ, ಹ್ಯಾಮರ್ ಎಸೆತ, ಬಾಲ್ ಬ್ಯಾಡ್ಮಿಂಟನ್, ಥ್ರೋಬಾಲ್, ಖೋ-ಖೋ, ವಾಲಿಬಾಲ್ ಹಾಗೂ ಟೆನ್ನಿಕಾಯ್ಟ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪದಕಗಳನ್ನು ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 100 ಮೀ., 200 ಮೀ., 400 ಮೀ., 800 ಮೀ., 1500 ಮೀ. ಹಾಗೂ 3000 ಮೀ. ಓಟ, ರಿಲೆ, ಉದ್ದ ಜಿಗಿತ, ಎತ್ತರ ಜಿಗಿತ, ಟ್ರಿಪಲ್ ಜಂಪ್, ಹ್ಯಾಮರ್ ಎಸೆತ, ವಾಲಿಬಾಲ್, ಖೋ-ಖೋ ಹಾಗೂ ಕಬ್ಬಡಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸಂತೋಷ್ ಅವರು ಡಿಸ್ಕಸ್ ಎಸೆತ, ಜಾವಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ಸಾಧನೆ ಮಾಡಿ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದಿದ್ದಾರೆ. ಚೈತ್ರ ಅವರು 800 ಮೀ., 1500 ಮೀ. ಹಾಗೂ 3000 ಮೀ. ಓಟಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬಾಲಕಿಯರ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ಗಳಿಸಿದ್ದಾರೆ.
ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿಯೂ ಕಾಲೇಜಿನ ಬಾಲಕರು 20 ಪದಕಗಳನ್ನು ಪಡೆದು ಬಾಲಕರ ಚಾಂಪಿಯನ್ಶಿಪ್ನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂತೋಷ್ ಅವರು ಡಿಸ್ಕಸ್ ಎಸೆತ, ಜಾವಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ವೈಯಕ್ತಿಕ ಚಾಂಪಿಯನ್ಶಿಪ್ ಪಡೆದಿದ್ದಾರೆ.
ಇದರೊಂದಿಗೆ ಅಥ್ಲೆಟಿಕ್ಸ್,ಕಬ್ಬಡಿ, ವಾಲಿಬಾಲ್, ಟೆನ್ನೀಸ್ ವಾಲಿಬಾಲ್ ಹಾಗೂ ಇತರ ಕ್ರೀಡೆಗಳಲ್ಲಿ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ. ಭೂಮಿಕ (ಕಬ್ಬಡಿ), ನಂದಿತ ಮತ್ತು ಮೋನಿಕ (ವಾಲಿಬಾಲ್), ಶಾಲಿನಿ ಮತ್ತು ಹೇಮಲತ (ಟೆನ್ನೀಸ್ ವಾಲಿಬಾಲ್) ಸೇರಿದಂತೆ ಹಲವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿಯೂ ಪ್ರೀತಮ್, ತರುಣ್, ಕಿಶೋರ್, ಮಿಥುನ್, ಅಕ್ಷಯ್, ಪ್ರಶಾಂತ್, ಮನೋಜ್, ಪರಿಣಿತ್ ಎನ್. ಗೌಡ,ರಿತ್ವಿಕ್, ಚಿರಂತ್, ಭವಿಷ್ ಹಾಗೂ ಚೇತನ್ ಸೇರಿದಂತೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲ ಜಯರಾಮ್ ಹೆಚ್., ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್ ಬಿ.ಎಂ., ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
