ಹಾಸನ : ಹಾಸನಾಂಬಾ ಜಾತ್ರೆಯಲ್ಲಿ ಯಾವುದೇ ರೀತಿಯ ವಿಐಪಿ ಪ್ರತಿಷ್ಠೆಗೆ ಮಣೆ ಹಾಕದೆ, ಶ್ರೀಸಾಮಾನ್ಯ ಭಕ್ತರ ದರ್ಶನಕ್ಕೆ ಆದ್ಯತೆ ನೀಡಿದ ಸರ್ಕಾರದ ಕ್ರಮ ಯಶಸ್ವಿಯಾಗಿ ನಡೆದಿರುವುದಕ್ಕೆ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು.
ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕಳೆದ ವರ್ಷವೂ ಬಂದಿದ್ದೆ, ಈ ವರ್ಷವೂ ದರ್ಶನ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ-ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ,” ಎಂದು ಹೇಳಿದರು.
ಮುಂದುವರೆದು ಅವರು ಹೇಳಿದರು — “ಈ ಬಾರಿ ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದು ರೈತರಿಗೆ ನಷ್ಟ ಉಂಟಾಗಿದೆ. ಆ ನಷ್ಟ ಭರಿಸಲು ಎನ್ಡಿಆರ್ಎಫ್ ನಿಧಿಯ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಪರಿಹಾರ ನೀಡುತ್ತಿದೆ. ಹಿಂದೆಂದೂ ಯಾರೂ ನೀಡದಷ್ಟು ಪರಿಹಾರವನ್ನು ನೀಡಿದ್ದೇವೆ. ಮುಂದಿನ ವರ್ಷ ಇಂತಹ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ,” ಎಂದರು.
ಇದನ್ನು ಓದಿ: ಹಾಸನಾಂಬ ದೇವಿ ದರ್ಶನ ಪಡೆದ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ — “ಹಾಸನಾಂಬ ನಮ್ಮೂರ ಹಬ್ಬ, ಭಾವೈಕ್ಯತೆಯ ತಾಣ”
“ನಮ್ಮದು ಕುವೆಂಪು ಅವರ ಆಶಯದಂತೆ ‘ಸರ್ವಜನಾಂಗದ ಶಾಂತಿಯ ತೋಟ’. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ. ಎಲ್ಲ ಧರ್ಮಗಳ ದೇವರ ಆಶಯವೂ ಮನುಷ್ಯ ಪ್ರೀತಿ, ಸೌಹಾರ್ದ ಮತ್ತು ಸಹಬಾಳ್ವೆಯ ಜೀವನ. ಅದಕ್ಕೆ ತಕ್ಕಂತೆ ನಾವು ಸಹೃದಯತೆಯಿಂದ ನಡೆದುಕೊಳ್ಳಬೇಕು,” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಾಸನಾಂಬ ಜಾತ್ರೆಗೆ ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, “ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಅಗತ್ಯ ಬಿದ್ದರೆ ಅನುದಾನ ಹಾಗೂ ಹಣಕಾಸಿನ ನೆರವು ನೀಡಲಾಗುವುದು,” ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಹೂಡ ಅಧ್ಯಕ್ಷ ಶಿವಪ್ಪ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
