ಹಾಸನ, ಜುಲೈ 23: ಹಾಸನ ಮಹಾನಗರ ಪಾಲಿಕೆಗೆ ಸರಕಾರ ಅನುದಾನ ನೀಡುವಲ್ಲಿ ಹಿಂದೇಟು ಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಎಚ್.ಪಿ. ಸ್ವರೂಪ್ಪ್ರಕಾಶ್, ಸರಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದರು.
ಹಾಸನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೂರು ವರ್ಷಗಳಿಂದ ಪಾಲಿಕೆಗೆ ಯಾವುದೇ ರೀತಿಯ ಅನುದಾನ ನೀಡದೇ ಸರಕಾರ ಮುಜುಗರದ ಪರಿಸ್ಥಿತಿಯನ್ನು ಉಂಟುಮಾಡಿದೆ,” ಎಂದು ಆರೋಪಿಸಿದರು.
ಪೌರಾಡಳಿತ ಸಚಿವರು ಅನುದಾನ ಭರವಸೆ ನೀಡಿದ್ದರೂ ಇದೀಗ “ಹೆಚ್ಚುವರಿ ಅನುದಾನ ಇಲ್ಲ, ಹೆಚ್ಚುವರಿ ಹುದ್ದೆ ಸೃಷ್ಟಿ ಇಲ್ಲ” ಎಂಬ ಲಿಖಿತ ಪತ್ರ ನೀಡಿರುವುದನ್ನು ಅವರು ಖಂಡಿಸಿದರು. “ಇದು ಹಾಸನ ಜನರ ಅಹಿತವಾಗುವ ನಿರ್ಧಾರ” ಎಂದು ಕಿಡಿಕಾರಿದರು.
37 ಹೊಸ ಹಳ್ಳಿಗಳ ಗತಿ ಏನು?
ಇತ್ತೀಚಿಗೆ ಹಾಸನ ಮಹಾನಗರ ಪಾಲಿಕೆಗೆ ಸೇರಿಸಲಾಗಿರುವ 37 ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಅಥವಾ ಶಾಸಕರ ನಿಧಿಯಿಂದ ಹಣವನ್ನು ಬಳಸಲು ಸಾಧ್ಯವಿಲ್ಲ. ಈ ಪ್ರದೇಶಗಳಿಂದ ಸುಮಾರು ₹25-30 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ ಯಾವುದೇ ಅಭಿವೃದ್ಧಿ ಕಣ್ಣುಹಾಯಿಲ್ಲ.
ಅನುದಾನ ಇಲ್ಲದೆ ಆಡಳಿತ ಹೇಗೆ?
ಪಾಲಿಕೆಗೆ ಹೆಚ್ಚುವರಿ ಹುದ್ದೆಗಳ ಅನುಮೋದನೆಯಿಲ್ಲದಂತೆಯೇ, ಅಗತ್ಯ ಅನುದಾನವೂ ಇಲ್ಲದಿರುವುದು ಪಾಲಿಕೆಯಲ್ಲಿ ಆಡಳಿತ ಚಟುವಟಿಕೆಗೆ ಅಡ್ಡಿಯಾಗಿದೆ. “ಅನುದಾನ ನೀಡಲಾಗದಿದ್ದರೆ ಮಹಾನಗರ ಪಾಲಿಕೆಯ ಅಧಿಸೂಚನೆ ಹಿಂತೆಗೆದುಕೊಳ್ಳಬೇಕು,” ಎಂದು ಅವರು ಒತ್ತಾಯಿಸಿದರು.
200 ಕೋಟಿ ರೂ. ಅನುದಾನಕ್ಕೆ ಒತ್ತಾಯ:
ಶಾಸಕರು ಹಾಸನ ಮಹಾನಗರ ಪಾಲಿಕೆಗೆ ತಕ್ಷಣ ₹200 ಕೋಟಿ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಹೋರಾಟ ಎಚ್ಚರಿಕೆ:
ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಹಾಸನದ ಸಮಸ್ಯೆಯನ್ನು ಮುಂದಿಟ್ಟುಕೊಂಡು, ಸರ್ಕಾರದ ವಿರುದ್ಧ ಎಲ್ಲಾ ಅನ್ಯಾಯಕ್ಕೊಳಗಾದ ಶಾಸಕರ ಜೊತೆಗೂಡಿ ಬೃಹತ್ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು. “ಸಿಎಂ ಕೇವಲ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಾರೆ, ಇದು ರಾಜಕೀಯ ಪಕ್ಷಪಾತ,” ಎಂದ ಅವರು, “ಸಿಎಂ ಎಲ್ಲರಿಗೂ ಸಮನ್ಯಾಯ ನೀಡಬೇಕು,” ಎಂದು ಆಗ್ರಹಿಸಿದರು.

[…] […]