ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬ ದೇವಿಯ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಹಾಸನಕ್ಕೆ ಆಗಮಿಸುತ್ತಿದ್ದಾರೆ. ನಗರದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆಮಾಡಿದ್ದರೂ, ದೇವಾಲಯದ ಸುತ್ತಮುತ್ತಲಿನ ಪ್ರಮುಖ ವ್ಯಾಪಾರ ಕೇಂದ್ರವಾದ ರಾಜಬೀದಿಯ ವರ್ತಕರು ಮಾತ್ರ ವ್ಯಾಪಾರವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಮಾನ್ಯವಾಗಿ ದೇವಿಯ ಗರ್ಭಗುಡಿ ತೆರೆಯುವ ಎರಡು ದಿನಗಳ ಮುನ್ನ ಬ್ಯಾರಿಕೇಡ್ಗಳನ್ನು ಅಳವಡಿಸುವುದು ವಾಡಿಕೆ. ಆದರೆ, ಈ ಬಾರಿ ವಾರಕ್ಕೂ ಮುನ್ನವೇ ಹೊಸಲೈನ್ ರಸ್ತೆಿಯಿಂದ ಸಂತೇಪೇಟೆ ಸರ್ಕಲ್ವರೆಗಿನ ರಾಜಬೀದಿಯಲ್ಲಿ ಬ್ಯಾರಿಕೇಡ್ಗಳು ಹಾಗೂ ಜರ್ಮನ್ ಟೆಂಟ್ಗಳನ್ನು ಅಳವಡಿಸಿರುವುದರಿಂದ ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಕುಂಠಿತಗೊಂಡಿದೆ. ಇದರಿಂದ ಅಂಗಡಿ ಮುಂಗಟ್ಟುಗಳ ಮಾಲೀಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

23 ದಿನಗಳವರೆಗೆ ವ್ಯಾಪಾರಕ್ಕೆ ಹೊಡೆತ!
ಹಾಸನಾಂಬ ದೇವಾಲಯದ ಗರ್ಭಗುಡಿ ತೆರೆಯುವ ಸುಮಾರು 10 ದಿನಗಳ ಮುಂಚಿನಿಂದ ಹಿಡಿದು ದೇವಾಲಯ ಮುಚ್ಚಿದ ನಂತರದ ದಿನಗಳವರೆಗೆ, ಅಂದಾಜು 23ಕ್ಕೂ ಹೆಚ್ಚು ದಿನಗಳ ಕಾಲ ಈ ಭಾಗದ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ವರ್ತಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ಪ್ರದೇಶದಲ್ಲಿ ಬಾಳೆಹಣ್ಣಿನ ಮಂಡಿಗಳು, ದ್ವಿಚಕ್ರ ವಾಹನಗಳ ಮಾರಾಟ ಮಳಿಗೆಗಳು, ಕ್ಯಾಂಟೀನ್ಗಳು, ಹೋಟೆಲ್ಗಳು, ದಿನಸಿ ಅಂಗಡಿಗಳು, ಕಬ್ಬಿಣ ಮತ್ತು ಸ್ಟೀಲ್ ಸಾಮಗ್ರಿಗಳ ಮಳಿಗೆಗಳು ಸೇರಿದಂತೆ ಹಲವು ವ್ಯಾಪಾರ ಮಳಿಗೆಗಳಿವೆ. ಕುಡಿಯುವ ನೀರು, ಊಟದ ತಟ್ಟೆ ಹಾಗೂ ಲೋಟಗಳ ವ್ಯಾಪಾರವೂ ಇಲ್ಲಿ ನಡೆಯುತ್ತದೆ. ಆದರೆ, ಬ್ಯಾರಿಕೇಡ್ಗಳ ಅಳವಡಿಕೆ ಮತ್ತು ಸಂಚಾರ ನಿರ್ಬಂಧಗಳಿಂದ ಗ್ರಾಹಕರ ಓಡಾಟ ಕಡಿಮೆಯಾಗಿ ವರ್ತಕರು ನಷ್ಟ ಅನುಭವಿಸುತ್ತಿದ್ದಾರೆ.

ಭಕ್ತರ ಅನುಕೂಲಕ್ಕಾಗಿ ವರ್ತಕರ ತ್ಯಾಗ
ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಸುಗಮ ದರ್ಶನದ ವ್ಯವಸ್ಥೆ ಕಲ್ಪಿಸುವುದು ಅಗತ್ಯವೇ ಆಗಿದೆ. ಆದರೆ, ಈ ವ್ಯವಸ್ಥೆಯ ಪರಿಣಾಮವಾಗಿ ಸ್ಥಳೀಯ ವರ್ತಕರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನೂ ಪರಿಗಣಿಸಬೇಕಿದೆ. ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದರೂ, ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸುತ್ತಿರುವ ವರ್ತಕರ ಸಹನೆ ಮತ್ತು ತ್ಯಾಗವನ್ನು ನಿರ್ಲಕ್ಷಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಲಿ
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ತೊಂದರೆಯಾಗದಂತೆ ಭದ್ರತೆ ಮತ್ತು ಸಂಚಾರ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸ್ಥಳೀಯ ವ್ಯಾಪಾರಿಗಳ ಹಿತಾಸಕ್ತಿಯನ್ನೂ ಜಿಲ್ಲಾಡಳಿತ ಗಮನಿಸಬೇಕು. ಬ್ಯಾರಿಕೇಡ್ಗಳ ಅಳವಡಿಕೆಯಿಂದ ವ್ಯಾಪಾರಕ್ಕೆ ತೊಂದರೆಯಾಗದಂತೆ ಸಾಧ್ಯವಿರುವ ಕಡೆಗಳಲ್ಲಿ ಪರ್ಯಾಯ ಮಾರ್ಗ, ಗ್ರಾಹಕರ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ದೇವಿಯ ದರ್ಶನಕ್ಕಾಗಿ ಆಗಮಿಸುವ ಭಕ್ತರು ಜಾತ್ರೆಯ ಸಂಭ್ರಮದ ನಡುವೆಯೇ ಸ್ಥಳೀಯ ವರ್ತಕರು ಎದುರಿಸುತ್ತಿರುವ ಸಂಕಷ್ಟವನ್ನೂ ಅರಿಯಬೇಕಿದೆ. ಜಾತ್ರಾ ಮಹೋತ್ಸವದ ಯಶಸ್ಸಿನ ಜೊತೆಗೆ ವರ್ತಕರ ಜೀವನೋಪಾಯಕ್ಕೂ ಧಕ್ಕೆಯಾಗದಂತೆ ಜಿಲ್ಲಾಡಳಿತ ಸಮತೋಲನದ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
