ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಇತಿಹಾಸ ಪ್ರಸಿದ್ಧ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತ ಹಾಗೂ ದೇವಾಲಯ ಟ್ರಸ್ಟ್ ಸಕಲ ಸಿದ್ಧತೆಗಳಲ್ಲಿ ತೊಡಗಿಕೊಂಡಿವೆ.
ಮೈಸೂರು ದಸರಾದಂತೆಯೇ ಈ ಬಾರಿ ಹಾಸನ ನಗರವೂ ಹಬ್ಬದ ವಾತಾವರಣಕ್ಕೆ ಸಜ್ಜಾಗಿದೆ. ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪ ಅಳವಡಿಸುವ ಕೆಲಸ ಜೋರಾಗಿದೆ. ನಗರ ಪ್ರವೇಶ ಮಾರ್ಗಗಳಲ್ಲಿ ಭಕ್ತರು ಮತ್ತು ಗಣ್ಯರನ್ನು ಸ್ವಾಗತಿಸಲು ಕಮಾನುಗಳು ಸ್ಥಾಪಿಸಲಾಗಿದೆ. ಭಕ್ತರಿಗೆ ದರ್ಶನದ ಅನುಭವ ಸುಗಮವಾಗಿಸಲು ಪ್ರಮುಖ ವೃತ್ತಗಳಲ್ಲಿ ಎಲ್ಇಡಿ ಪರದೆಗಳು ಅಳವಡಿಸಲಾಗಿದೆ.
ನಗರದಾದ್ಯಂತ ಹಾಳಾದ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳು ಪೂರ್ಣಗೊಂಡಿವೆ. ಈ ಬಾರಿ ದೇವಿ ದರ್ಶನದ ಜೊತೆಗೆ ಪ್ರವಾಸಿಗರಿಗೆ ವೈಶಿಷ್ಟ್ಯಪೂರ್ಣ ಟೂರ್ ಪ್ಯಾಕೇಜ್ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು ಯಾವುದೇ ಅಸಮಾಧಾನ ಉಂಟಾಗದಂತೆ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಸೂಚನೆ ನೀಡಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ದೇವಾಲಯದ ಒಳ-ಹೊರ ಅಲಂಕಾರ ಕಾರ್ಯ ಮುಗಿದಿದ್ದು, ಹೂವಿನ ಸಿಂಗಾರದಿಂದ ದೇವಾಲಯ ಸಜ್ಜಾಗಿದೆ. ಆಶ್ವೀಜ ಮಾಸದ ಮೊದಲ ಗುರುವಾರ, ಅಕ್ಟೋಬರ್ 9ರಂದು ಮಧ್ಯಾಹ್ನ 12.30ಕ್ಕೆ ಗರ್ಭಗುಡಿಯ ಬಾಗಿಲು ತೆರೆಯಲಾಗುವುದು, ಬಲಿಪಾಡ್ಯಮಿಯ ಮಾರನೇ ದಿನವಾದ ಅಕ್ಟೋಬರ್ 23ರಂದು ಸಂಪ್ರದಾಯಬದ್ಧವಾಗಿ ಮುಚ್ಚಲಾಗುತ್ತದೆ. ಈ ಬಾರಿ 13 ದಿನಗಳ ಕಾಲ ಭಕ್ತರಿಗೆ ದರ್ಶನದ ಅವಕಾಶ ಲಭ್ಯ.
ಇದನ್ನು ಓದು: ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲು ಜಿಲ್ಲಾಡಳಿತದ ಭಾರೀ ಸಿದ್ಧತೆ – ಭಕ್ತಿಭಾವದ ಸಂಭ್ರಮದಲ್ಲಿ ಹಾಸನ ನಗರ
ಆಹ್ವಾನ ಪತ್ರಿಕೆಗಳ ಹಂಚಿಕೆ ಕಾರ್ಯವೂ ಆರಂಭವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಕಳೆದ ಬಾರಿ ಸುಮಾರು 20ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಾಗಿದೆ. ಅದಕ್ಕಾಗಿ ಭದ್ರತಾ ವ್ಯವಸ್ಥೆ, 100ಕ್ಕೂ ಹೆಚ್ಚು ಸಂಚಾರಿ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ, ನೂಕುನುಗ್ಗಲು ತಡೆ ಕ್ರಮಗಳು ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಜಿಲ್ಲಾಡಳಿತ ಒದಗಿಸುತ್ತಿದೆ.
ಭಕ್ತರ ಸುರಕ್ಷತೆಗೆ ಕಠಿಣ ಕ್ರಮಗಳು:
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಭಕ್ತರ ಸುರಕ್ಷತೆಗಾಗಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಿದೆ. ವಯೋವೃದ್ಧರು ಮತ್ತು ಅಂಗವಿಕಲ ಭಕ್ತರಿಗೆ ಸುಲಭ ಪ್ರವೇಶಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಫ್ಯಾನ್ಗಳು ಮತ್ತು ಗರ್ಭಗುಡಿ ಮುಂಭಾಗದಲ್ಲಿ ಎಸಿ ವ್ಯವಸ್ಥೆ ಅಳವಡಿಸಲಾಗಿದೆ.
ಸಾಲುಗಳಲ್ಲಿ ಸುಗಮವಾಗಿ ಸಾಗಲು ಬ್ಯಾರಿಕೇಡ್ಗಳು, ಬಿಸಿಲು-ಮಳೆಯಿಂದ ರಕ್ಷಣೆ ನೀಡಲು ಜರ್ಮನ್ ಟೆಂಟ್ಗಳು, ನೆಲಕ್ಕೆ ಮ್ಯಾಟ್ಗಳು ಅಳವಡಿಸುವ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಭಕ್ತರಿಗೆ ಮಜ್ಜಿಗೆ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸಹಾಯ ಕೇಂದ್ರಗಳು ಮತ್ತು ತುರ್ತು ವಾಹನಗಳು ಸಜ್ಜಾಗಿವೆ.
ಪೊಲೀಸ್ ಇಲಾಖೆ ವಿಶೇಷ ಪೆಟ್ರೋಲಿಂಗ್ ದಳ ಮತ್ತು ನಿಯಂತ್ರಣ ಕೊಠಡಿ (Control Room) ಸ್ಥಾಪಿಸಿ, ಉತ್ಸವದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ದೃಢ ಕ್ರಮ ಕೈಗೊಂಡಿದೆ.
ನಗರದ ಸಜ್ಜುಗೊಂಡ ಹಾಸನಾಂಬೆ ದರ್ಶನೋತ್ಸವ ಈಗಾಗಲೇ ಭಕ್ತರ ಕಣ್ಣಿಗೆ ಆಕರ್ಷಕವಾಗಿದ್ದು, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.

[…] […]