ಹಾವೇರಿ/ದಾವಣಗೆರೆ: ಮುಂಗಾರು ಮಳೆ ಅಂತ್ಯದ ಹಂತ ತಲುಪಿರುವ ಬೆನ್ನಲ್ಲೇ ಮಧ್ಯ ಕರ್ನಾಟಕದ ಹಾವೇರಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಅಕ್ಟೋಬರ್ ಆರಂಭದಲ್ಲೇ ಬೇಸಿಗೆಯ ವಾತಾವರಣ ಕಂಡುಬಂದಿದ್ದು, ತಾಪಮಾನ ಏರಿಕೆಯಿಂದ ರೈತರಲ್ಲಿ ಆತಂಕ ಮೂಡಿದೆ.
ಹಾವೇರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಕ್ಟೋಬರ್ ಮೊದಲ ವಾರದ ಸಾಮಾನ್ಯ ತಾಪಮಾನಕ್ಕಿಂತ ಸುಮಾರು 3 ಡಿಗ್ರಿ ಹೆಚ್ಚು ಇದೆ. ದಾವಣಗೆರೆಯಲ್ಲಿ ಸೋಮವಾರ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಜಿಲ್ಲೆಯಲ್ಲಿ ಮಳೆ ಕೊರತೆಯೂ ತೀವ್ರವಾಗಿದ್ದು, ಜೂನ್ 1ರಿಂದ ಅಕ್ಟೋಬರ್ 1ರವರೆಗೆ ವಾಡಿಕೆಗಿಂತ ಸುಮಾರು 52ರಷ್ಟು ಮಳೆ ಕಡಿಮೆಯಾಗಿದೆ. ಜುಲೈನಲ್ಲಿ ಶೇ.40 ಹಾಗೂ ಆಗಸ್ಟ್ನಲ್ಲಿ ಶೇ.39.9ರಷ್ಟು ಮಳೆ ಕೊರತೆ ದಾಖಲಾಗಿದೆ.
ಸೆಪ್ಟೆಂಬರ್ ತಿಂಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಸೆಪ್ಟೆಂಬರ್ 1ರಿಂದ 30ರವರೆಗೆ ಹಾವೇರಿಯಲ್ಲಿ ಕೇವಲ 16 ಮಿ.ಮೀ. ಮಳೆ ದಾಖಲಾಗಿದ್ದು, ಈ ಅವಧಿಯ ವಾಡಿಕೆ ಮಳೆ 85 ಮಿ.ಮೀ. ಆಗಿದೆ. ಸೆಪ್ಟೆಂಬರ್ 2ರಂದು ಕೆಲವೆಡೆ ತುಂತುರು ಮಳೆ ಹೊರತುಪಡಿಸಿ ಬಹುತೇಕ ದಿನಗಳು ಒಣಹವೆಯಿಂದ ಕೂಡಿದ್ದವು.
ಮೋಡಗಳ ಕೊರತೆ, ನಿರಂತರ ಬಿಸಿಲು ಹಾಗೂ ಮಳೆಯ ಅಭಾವದಿಂದ ತೇವಾಂಶ ಕಡಿಮೆಯಾಗಿದ್ದು, ತಾಪಮಾನ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಕೃಷಿ ಬೆಳೆಗಳು ಒಣಗುವ ಆತಂಕ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.
