ಬಿಹಾರದ ರಾಜ್ಗಿರ್ನಲ್ಲಿ ನಡೆದ ಹಾಕಿ ಏಷ್ಯಾಕಪ್ 2025 (Hockey Asia Cup 2025) ಫೈನಲ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿತು. ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ 4-1 ಗೋಲುಗಳಿಂದ ಜಯ ಸಾಧಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಈ ಜಯದೊಂದಿಗೆ ಟೀಂ ಇಂಡಿಯಾ ನಾಲ್ಕನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿಯುವ ಸಾಧನೆ ಮಾಡಿದೆ.
ಭಾರತ ತಂಡ ಆರಂಭದಿಂದಲೇ ಮೇಲುಗೈ ಸಾಧಿಸಿತು. ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಸುಖ್ಜಿತ್ ಸಿಂಗ್ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ದಿಲ್ಪ್ರೀತ್ ಸಿಂಗ್ ಎರಡನೇ ಕ್ವಾರ್ಟರ್ನಲ್ಲಿ ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿದರು. ಮೂರನೇ ಕ್ವಾರ್ಟರ್ನಲ್ಲಿ ಮತ್ತೊಮ್ಮೆ ದಿಲ್ಪ್ರೀತ್ ಸಿಂಗ್ ಗೋಲು ಗಳಿಸಿ 3-0 ಅಂತರ ಸಾಧಿಸಿದರು. ಪಂದ್ಯದ ಅಂತ್ಯದಲ್ಲಿ ದಕ್ಷಿಣ ಕೊರಿಯಾ ಒಂದು ಗೋಲು ಗಳಿಸಿದರೂ ಪಂದ್ಯ ಫಲಿತಾಂಶವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ.
ಈ ಜಯದಿಂದ ಟೀಂ ಇಂಡಿಯಾ 2026ರಲ್ಲಿ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ನಲ್ಲಿ ನಡೆಯಲಿರುವ FIH ಪುರುಷರ ವಿಶ್ವಕಪ್ ಟೂರ್ನಮೆಂಟ್ಗೆ ನೇರ ಅರ್ಹತೆ ಪಡೆದುಕೊಂಡಿದೆ.
2017ರ ನಂತರ ಭಾರತ ತಂಡಕ್ಕೆ ದೊರೆತಿರುವ ಈ ಏಷ್ಯಾಕಪ್ ಜಯವು ಹಾಕಿ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವನ್ನು ಸೇರಿಸಿದೆ.
