ಹಾಸನ: ನಗರದ ನ್ಯೂ ಮಿನರ್ವಾ ಗಿರಣಿಯಲ್ಲಿದ್ದ ಸುಮಾರು 25 ಲಕ್ಷ ಮೀಟರ್ ಬಟ್ಟೆ ದಾಸ್ತಾನು ಮಾರಾಟದಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಹೊರಬಂದಿದೆ. ಇದರಿಂದ ರಾಷ್ಟ್ರೀಯ ಜವಳಿ ನಿಗಮಕ್ಕೆ (ಎನ್ಟಿಸಿ) ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಹಿತಾಸಕ್ತರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ನ್ಯೂ ಮಿನರ್ವಾ ಮಿಲ್ ವರ್ಕರ್ಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಯೂನಿಯನ್ ಜಿಲ್ಲಾಧ್ಯಕ್ಷ ಎಂ.ಸಿ. ಡೋಂಗ್ರೆ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಧು ಮಾಧ್ಯಮದೊಂದಿಗೆ ಮಾತನಾಡಿ, “2023ರಲ್ಲಿ ನಡೆದ ಸ್ಟಾಕ್ ಮೌಲ್ಯಮಾಪನದಲ್ಲಿ ಬಟ್ಟೆ ದಾಸ್ತಾನದ ಮೌಲ್ಯವನ್ನು 17 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ, ಇದೀಗ ಕೇವಲ 11.76 ಕೋಟಿ ರೂ. ಪೋರ್ಟಲ್ ದರದಲ್ಲಿ ಮುಂಬೈನ ನೋಯೆಲ್ ಟೆಕ್ಸ್ಟೈಲ್ಸ್ಗೆ ಮಾರಾಟ ಮಾಡಲಾಗಿದೆ. ಸಾಮಾನ್ಯವಾಗಿ ಓಪನ್ ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಮಾಡಬೇಕಾದರೂ, ಇದನ್ನು ಎನ್ಟಿಸಿ ಯ ಆಂತರಿಕ ಪೋರ್ಟಲ್ ಮೂಲಕವೇ ನಡೆಸಲಾಗಿದೆ” ಎಂದು ಆರೋಪಿಸಿದರು.
ಅವರ ಪ್ರಕಾರ, ನಿಜವಾದ ಖರೀದಿದಾರರಿಂದ ಹೆಚ್ಚಿನ ಕೊಡುಗೆಗಳು ಬಂದಿದ್ದರೂ ಅವನ್ನು ನಿರ್ಲಕ್ಷಿಸಲಾಗಿದೆ. ಉದಾಹರಣೆಗೆ, ಸೂರತ್ನ ವರದನ್ ಟೆಕ್ಸ್ಟೈಲ್ಸ್ ರೂ. 18.50 ಕೋಟಿ ಪಾವತಿಸಲು ಸಿದ್ಧವಾಗಿದ್ದರೆ, ಮಫತ್ಲಾಲ್–ವಡಿಲಾಲ್ ಗುಂಪು ಪೋರ್ಟಲ್ ದರಕ್ಕಿಂತ 10% ಹೆಚ್ಚಾಗಿ ನೀಡಲು ತಯಾರಾಗಿತ್ತು. ಆದರೂ ಈ ಕೊಡುಗೆಗಳನ್ನು ಕಡೆಗಣಿಸಿ ಕಡಿಮೆ ದರದಲ್ಲಿ ಮಾರಾಟ ಮಾಡುವ ಮೂಲಕ ಕನಿಷ್ಠ 4–5 ಕೋಟಿ ರೂ. ನಷ್ಟವನ್ನು ಉದ್ದೇಶಪೂರ್ವಕವಾಗಿ ಉಂಟುಮಾಡಲಾಗಿದೆ ಎಂದು ಆರೋಪ ಹೊರಿಸಲಾಯಿತು.
ಈ ಒಪ್ಪಂದದಲ್ಲಿ ಎನ್ಟಿಸಿ ಉನ್ನತ ಅಧಿಕಾರಿಗಳಾದ ಮಾರ್ಕೆಟಿಂಗ್ ಮತ್ತು ಹೆಚ್ಆರ್ ನಿರ್ದೇಶಕರು, ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್)ಗಳ ಪಾತ್ರವಿದೆ ಎಂಬ ಶಂಕೆ ವ್ಯಕ್ತವಾಗಿದ್ದು, “ದಾಸ್ತಾನಿನ ವಿಲೇವಾರಿಯನ್ನು ತಕ್ಷಣ ನಿಲ್ಲಿಸಿ, ನೋಯೆಲ್ ಟೆಕ್ಸ್ಟೈಲ್ಸ್ಗೆ ಮಾರಾಟದ ಕುರಿತು ಸಂಪೂರ್ಣ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಪಾತ್ರವನ್ನು ಬಹಿರಂಗಪಡಿಸಬೇಕು” ಎಂದು ಯೂನಿಯನ್ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ನ್ಯೂ ಮಿನರ್ವಾ ಮಿಲ್ ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಧು, ಸಂತೋಷ್, ಮಂಜುನಾಥ್, ಶಿವಪ್ರಸಾದ್ ಮತ್ತಿತರರು ಭಾಗವಹಿಸಿದ್ದರು.
