ಹಾಸನ: ಮೊಬೈಲ್ ಅಡಮಾನ ವಿಚಾರಕ್ಕೆ ನಡೆದ ಸಣ್ಣ ಜಗಳವೇ ಕೊನೆಗೆ ಜೀವಹರಣಕ್ಕೆ ಕಾರಣವಾಯಿತು. ಮಂಗಳವಾರ ರಾತ್ರಿ ಸ್ನೇಹಿತರೆಂಬ ಮುಖವಾಡದ ಹಿಂದಿದ್ದ ದುಷ್ಕರ್ಮಿಗಳು ದೇವರಾಯಪಟ್ಟಣದ ಅಂಕಿತ್.ಸಿ. (21) ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಯರೇಹಳ್ಳಿ ಬಳಿ ನಡೆದಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಮೊಹಮದ್ ಸುಜೀತ್ ಅವರ ಮಾರ್ಗದರ್ಶನದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆಗೆ ಮುಂದಾದ ಪೊಲೀಸರು ಕೇವಲ 24 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಮೂವರು ಬಾಲಾಪರಾಧಿಗಳು ಎನ್ನಲಾಗಿದೆ. ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ಘಟನೆ ಹೀಗಿದೆ:
ಅಂಕಿತ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದವನಾಗಿದ್ದು, ದೊಡ್ಡ ಸ್ನೇಹ ಬಳಗ ಹೊಂದಿದ್ದ. ಸ್ನೇಹಿತ ಹರ್ಷನ ಮೊಬೈಲ್ನ್ನು ನಂದ ಹಾಗೂ ಕೆಂಪ ಅಡ ಇಟ್ಟು ಹಣ ಪಡೆದಿದ್ದರು. ಈ ವಿಚಾರವನ್ನು ಹರ್ಷ ಅಂಕಿತ್ಗೆ ತಿಳಿಸಿದ್ದರಿಂದ ಮಧ್ಯಾಹ್ನ ತಣ್ಣೀರುಹಳ್ಳದ ಬಳಿ ಅಂಕಿತ್ ಇಬ್ಬರನ್ನು ಪ್ರಶ್ನಿಸಿ ಹೊಡೆದಿದ್ದ. ನಂತರ ಕಾಂಪ್ರಮೈಸ್ ಆದರೂ, ಜಗಳದ ಕಿಡಿ ಆರದೇ ಉಳಿದಿತ್ತು.
ಅದೇ ಸಂಜೆ ಸ್ನೇಹಿತರ ಕರೆಮೇಲೆ ಅಂಕಿತ್ ಯರೇಹಳ್ಳಿಗೆ ಹೋದಾಗ, ಪೂರ್ವನಿಯೋಜಿತವಾಗಿ ಕಾಯುತ್ತಿದ್ದ ಆರೋಪಿಗಳು ಅವನ ಮೇಲೆ ಏಕಾಏಕಿ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು. ಹಬ್ಬದ ದಿನವೇ ಮಗನನ್ನು ಕಳೆದುಕೊಂಡ ಅಂಕಿತ್ ಕುಟುಂಬ ಶೋಕಸಾಗರದಲ್ಲಿ ಮುಳುಗಿತು. ಸ್ಥಳೀಯರು ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.
ಅಂಕಿತ್ ಕೊಲೆಗೆ ಎಣ್ಣೆ ಮತ್ತು ಗಾಂಜಾ ಅಮಲೇ ಪ್ರಮುಖ ಕಾರಣ ಎನ್ನಲಾಗಿದೆ. ಮದ್ಯಪಾನ ಹಾಗೂ ಮಾದಕ ವಸ್ತು ಸೇವನೆಯ ಅಮಲಿನಲ್ಲಿ ಯುವಕರು ಗ್ಯಾಂಗ್ರೇಪ್, ಕೊಲೆ ಸೇರಿದಂತೆ ಅನೇಕ ಅಪರಾಧಗಳಲ್ಲಿ ತೊಡಗುತ್ತಿದ್ದಾರೆ. ಗಾಂಜಾ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂಬ ಒತ್ತಾಯ ಇದೀಗ ಜೋರಾಗಿದೆ. ಅಂಕಿತ್ ಹತ್ಯೆಗೈದ ಆರೋಪಿಗಳೂ ಮದ್ಯಪಾನ ಹಾಗೂ ಗಾಂಜಾ ಸೇವಿಸಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ.

[…] […]