ಯುವಜನರಲ್ಲಿ ಹೆಚ್ಚುತ್ತಿರುವ ಮರೆವು: ‘ಮೆದುಳಿನ ಮಂಜು’ ಆತಂಕ
ಹಿಂದೆ ವೃದ್ಧರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಮರೆವು ಸಮಸ್ಯೆ ಇದೀಗ ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಚಿಂತಾಜನಕ ಬೆಳವಣಿಗೆಯಾಗಿದೆ. ಸಣ್ಣ ವಿಷಯಗಳನ್ನೂ ಮರೆತುಬಿಡುವುದು, ನೆನಪಿಟ್ಟುಕೊಳ್ಳಲು ಕಷ್ಟವಾಗುವುದು, ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಅಸಾಧ್ಯವಾಗುವುದು ಇವುಗಳೆಲ್ಲ ‘ಮೆದುಳಿನ ಮಂಜು’ (Brain Fog) ಲಕ್ಷಣಗಳಾಗಿರಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ತಜ್ಞರ ಪ್ರಕಾರ, ಈ ಸಮಸ್ಯೆಯಿಂದ ಬಳಲುವವರು ಸ್ಮರಣಶಕ್ತಿ ನಷ್ಟ, ಕೇಂದ್ರೀಕರಣದ ಕೊರತೆ, ಮಾಹಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ ಅನುಭವಿಸುತ್ತಾರೆ. ಜೊತೆಗೆ ಒತ್ತಡ, ನಿರಂತರ ಆಯಾಸ, ಅನಗತ್ಯ ಆಲೋಚನೆಗಳು ಹಾಗೂ ಮಾನಸಿಕ ಅಸ್ವಸ್ಥತೆಯ ಭಾವನೆಗಳು ಕಾಡುತ್ತವೆ.
ಒತ್ತಡವೇ ಪ್ರಮುಖ ಕಾರಣ
ಮೆದುಳಿನ ಮಂಜು ಯಾವುದೇ ನಿರ್ದಿಷ್ಟ ರೋಗವಲ್ಲ. ಇದು ಮರೆವು ಮತ್ತು ಅಜಾಗರೂಕತೆಯ ಲಕ್ಷಣಗಳ ಸಮೂಹವಾಗಿದೆ. ಇದಕ್ಕೆ ಪ್ರಮುಖ ಕಾರಣ ಒತ್ತಡ ಎಂದು ವೈದ್ಯರು ಹೇಳುತ್ತಾರೆ. ಅತಿಯಾದ ಒತ್ತಡ ರಕ್ತದೊತ್ತಡವನ್ನು ಹೆಚ್ಚಿಸಿ ಸ್ಮರಣಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲ ಸಂದರ್ಭಗಳಲ್ಲಿ ಇದು ಮಾನಸಿಕ ಅಸಮತೋಲನಕ್ಕೆ ಕಾರಣವಾಗುವುದಲ್ಲದೇ ಮಾತನಾಡಲು ಸಹ ತೊಂದರೆ ಉಂಟುಮಾಡಬಹುದು. ಹಾರ್ಮೋನುಗಳ ಅಸಮತೋಲನ ಕೂಡ ಮರೆವಿಗೆ ಪ್ರಮುಖ ಕಾರಣವಾಗಿದ್ದು, ನಿರ್ಲಕ್ಷಿಸಿದರೆ ಬೊಜ್ಜು, ಮಧುಮೇಹದಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಡಿಜಿಟಲ್ ಸಾಧನಗಳ ಅತಿಯಾದ ಬಳಕೆ
ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್ಗಳನ್ನು ಅತಿಯಾಗಿ ಬಳಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ನಿದ್ರಾಹೀನತೆ ಉಂಟಾಗುತ್ತದೆ. ಇದರ ಪರಿಣಾಮವಾಗಿ ಒತ್ತಡ ಹೆಚ್ಚಾಗಿ ಹಾರ್ಮೋನುಗಳ ಸಮತೋಲನ ಕದಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ನಿದ್ರಾಹೀನತೆ, ತಲೆನೋವು ಪ್ರಮುಖ ಲಕ್ಷಣ
ಮರೆವು ದೇಹ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರಾಹೀನತೆ, ಆಗಾಗ್ಗೆ ತಲೆನೋವು, ದೌರ್ಬಲ್ಯ, ನಿರಂತರ ಆಯಾಸ, ಕಿರಿಕಿರಿ ಸ್ವಭಾವ ಇವು ಸಾಮಾನ್ಯ ಲಕ್ಷಣಗಳಾಗಿವೆ. ಸಣ್ಣ ವಿಷಯಗಳನ್ನು ಮರೆತುಬಿಡುವುದು ಹಾಗೂ ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಆಗದಿರುವುದು ಸಹ ಈ ಸಮಸ್ಯೆಯ ಭಾಗವಾಗಿದೆ.
ತಡೆಗಟ್ಟಲು ಏನು ಮಾಡಬೇಕು?
ಮೆದುಳಿನ ಮಂಜು ತಡೆಯಲು ಮೊದಲು ಮೊಬೈಲ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಬಳಕೆಯನ್ನು ಕಡಿಮೆ ಮಾಡಬೇಕು. ದಿನನಿತ್ಯದ ಬಳಕೆಗೆ ಸಮಯ ಮಿತಿಯನ್ನು ನಿಗದಿಪಡಿಸಿ ಪಾಲಿಸುವುದು ಅಗತ್ಯ. ಪ್ರತಿಯೊಂದು ಕೆಲಸಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಟ್ಟು ಅದನ್ನು ಪೂರ್ಣಗೊಳಿಸುವ ಅಭ್ಯಾಸ ಬೆಳೆಸಬೇಕು. ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ, ಸಾಕಷ್ಟು ನಿದ್ರೆ ಕೂಡ ಅತಿ ಮುಖ್ಯ.
ಇದೇ ರೀತಿ, ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಲು ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಆಲೋಚನೆಗಳನ್ನು ಹಂಚಿಕೊಳ್ಳಬೇಕು. ಸಾಮಾಜಿಕ ಜೀವನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕುಟುಂಬಕ್ಕೆ ಸಮಯ ನೀಡಬೇಕು. ಸಾಧ್ಯವಾದಷ್ಟು ಡಿಜಿಟಲ್ ಸಾಧನಗಳಿಂದ ದೂರವಿರುವುದು ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
